ಮಹಾದಾಯಿ ವಿಚಾರದಲ್ಲಿ ಜಗದೀಶ್ ಶೆಟ್ಟರ್, ಜೋಶಿ ಅನ್ಯಾಯ ಮಾಡಿದ್ದಾರೆ: ಸಚಿವ ಡಿಕೆಶಿ

Update: 2019-05-13 16:44 GMT

ಹುಬ್ಬಳ್ಳಿ, ಮೇ 13: ಉತ್ತರ ಕರ್ನಾಟಕದ ರೈತರ ಪ್ರಮುಖ ಬೇಡಿಕೆಯಾಗಿರುವ ಮಹಾದಾಯಿ ವಿಚಾರದಲ್ಲಿ ಈ ಭಾಗದ ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ಅವರಿಂದ ನಮಗೆ ಅನ್ಯಾಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹರಿಹಾಯ್ದರು.

ಶಿವಳ್ಳಿ ಯಾರಿಗೂ ತೊಂದರೆ ಕೊಡದ ಸರಳ, ಸಜ್ಜನಿಕೆಯ ರಾಜಕಾರಣಿ‌. ಕುಸುಮಾ ಶಿವಳ್ಳಿ ಅವರು ಗೆದ್ದರೆ ನಾನು ಮೂರ್ನಾಲ್ಕು ತಿಂಗಳು ಇಲ್ಲೇ ಇರುತ್ತೇನೆ. ಶಿವಳ್ಳಿ ಅವರ ಬಾಕಿ ಉಳಿದ ಕೆಲಸಗಳನ್ನು ಕುಸುಮಕ್ಕನ ಜತೆ ನಿಂತುಕೊಂಡು ಪೂರ್ತಿಗೊಳಿಸುತ್ತೇನೆ. ಆ ಮೂಲಕ ಶಿವಳ್ಳಿಯವರ ಕನಸನ್ನು ಸಾಕಾರಗೊಳಿಸುತ್ತೇನೆ ಎಂದು ಅವರು ಹೇಳಿದರು.

ಇಲ್ಲಿ ಗೆದ್ದರೆ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತ ಬಿಜೆಪಿ ಅವರು ಹೇಳ್ತಿದ್ದಾರೆ. ಅವರು ಸಿಎಂ ಆಗೋಕೆ ನಾವೇನೂ ಕಡ್ಲೇ ಕಾಯಿ ತಿಂತಿದ್ದೀವಾ. ನಾವು ಸರಕಾರ ನಡೆಸುತ್ತಿದ್ದೀವೆ ಎಂದು ಶಿವಕುಮಾರ್ ತಿಳಿಸಿದರು. ಮಹಾದಾಯಿ ವಿಚಾರದಲ್ಲಿ ಜಗದೀಶ್ ಶೆಟ್ಟರ್, ಜೋಶಿ ನಮಗೆ ಅನ್ಯಾಯ ಮಾಡಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರರ್ಕರ ರಾಜ್ಯದ ವಿರುದ್ಧ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಇನ್ನು ಚುನಾವಣೆ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ, ರಾಜೀವ್ ಗಾಂಧಿ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಬೇಸರದ ಸಂಗತಿ. ಇದೇ ತಿಂಗಳು 23ರ ನಂತರ ಕೇಂದ್ರದಲ್ಲಿ ಮೋದಿ ಸರಕಾರ ಇರುವುದಿಲ್ಲ‌. ಕಾಂಗ್ರೆಸ್ ಸರಕಾರ ಬರುತ್ತದೆ ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪನ ರಾಜಕೀಯ ದಿನಗಳು ಕೊನೆಗೊಳ್ಳುತ್ತಿದೆ‌. ಬಿಜೆಪಿ ಸ್ಥಳೀಯ ನಾಯಕರ ಪಾಲಿಗೆ ಕಾಂಗ್ರೆಸ್ ಬಾಗಿಲು ಯಾವತ್ತೂ ತೆಗೆದಿರುತ್ತೆ. ಅಧಿಕಾರ ಇದ್ದಾಗ ಬಿ.ಎಸ್.ಯಡಿಯೂರಪ್ಪ ಏನೂ ಮಾಡಿಲ್ಲ. ಈಗ ಏನು ಮಾಡ್ತಾರೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News