ಸಿದ್ದರಾಮಯ್ಯ ವಿರುದ್ಧ ಯಾವತ್ತೂ ಮಾತನಾಡಿಲ್ಲ: ಸಚಿವ ಜಿ.ಟಿ.ದೇವೇಗೌಡ

Update: 2019-05-13 16:55 GMT

ಮೈಸೂರು,ಮೇ.13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ಯಾವಾಗಲೂ ಗೌರವ ಇದೆ. ಇನ್ನು ಹೆಚ್.ವಿಶ್ವನಾಥ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಸಚಿವ ಜಿ.ಟಿ ದೇವೇಗೌಡ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಟ್ವೀಟ್ ಮಾಡಿದ್ದಾರಂತೆ. ಆದರೆ ಅದನ್ನು ನಾನು ನೋಡಿಲ್ಲ. ಅವರು ಯಾಕೆ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ವಿಚಾರ ಕುರಿತು ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಹೇಳಿದ್ದಾರೆ. ಇನ್ಯಾಕೆ ಬೇರೆ ಮಾತು. ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು. 23ರ ರಿಸಲ್ಟ್ ಬರುವವರೆಗೂ ಎಲ್ಲರ ಹೇಳಿಕೆಯೂ ವೇಸ್ಟ್. ಯಾರು ಏನೇ ಹೇಳಿಕೆ ಕೊಟ್ಟರೂ ಫಲಿತಾಂಶ ಬರುವವರೆಗೆ ಎಲ್ಲವೂ ವ್ಯರ್ಥ ಎಂದರು.

ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೆಂಪಲ್ ರನ್ ಬಗ್ಗೆ ಟೀಕಿಸಿದ ನಾಯಕರಿಗೆ ತಿರುಗೇಟು ನೀಡಿದ ಸಚಿವ ಜಿ.ಟಿ ದೇವೇಗೌಡ, ದೇವಸ್ಥಾನಕ್ಕೆ ಹೋಗುವುದಕ್ಕೆ ಟೀಕೆ ಟಿಪ್ಪಣೆಯೇ. ಯಾರು ದೇವಸ್ಥಾನಕ್ಕೆ ಹೋಗಿಲ್ಲ? ಸಿಎಂ ಆಗಿದ್ದ ಎಲ್ಲರೂ ಹೋಗಿದ್ದಾರೆ, ಯಾಕೆ ಯಡಿಯೂರಪ್ಪ ಹೋಗಿಲ್ಲವಾ ಎಂದು ಪ್ರಶ್ನಿಸಿದರು.

ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನೇ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ನೀರಿಲ್ಲ, ಮೇವಿಲ್ಲ ಅಂತ ಕೇಳಿ. ಅದು ಬಿಟ್ಟು ಬೇರೆ ಮಾತು ಬೇಡ. ಜನಪ್ರತಿನಿಧಿಗಳು ಪ್ರತಿ ಪಕ್ಷದ ನಾಯಕರು ಈ ಬಗ್ಗೆ ನೋಡಿಕೊಂಡು ಮಾತನಾಡಬೇಕು ಎಂದು ಜಿ.ಟಿ ದೇವೇಗೌಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News