ಯಾರಿಗೂ ಕೇಡು ಬಯಸದ ರಝೀನಾಗೆ ಈ ಸಾವು ನ್ಯಾಯವೇ ?

Update: 2019-05-14 06:18 GMT
ಖಾದರ್ ಕುಕ್ಕಾಡಿ 

ದುಬೈ: ''ರಝೀನಾ ಇಲ್ಲದ ಜೀವನ ಮತ್ತೆಂದೂ ಹಿಂದಿನಂತಾಗದು,'' ಹೀಗೆಂದು ನೋವಿನಿಂದ ಹೇಳುತ್ತಾರೆ ಮಂಗಳೂರಿನ ಅಬ್ದುಲ್ ಖಾದರ್ ಕುಕ್ಕಾಡಿ.

ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ಸರಣಿ ಸ್ಫೋಟ ನಡೆದ ಸ್ಥಳಗಳಲ್ಲೊಂದಾಗಿದ್ದ ಶಾಂಗ್ರಿ-ಲಾ ಹೋಟೆಲ್ ದುರಂತದಲ್ಲಿ ಬಲಿಯಾದವರಲ್ಲಿ ಅವರ ಪತ್ನಿ ರಝೀನಾ ಕುಕ್ಕಾಡಿ (60) ಕೂಡ ಒಬ್ಬರಾಗಿದ್ದರು.

ಭಾರತೀಯ ಮೂಲದವರಾಗಿದ್ದರೂ ಶ್ರೀಲಂಕಾದಲ್ಲಿ ಬೆಳೆದಿದ್ದ ರಝೀನಾ ನಂತರ ದುಬೈನ ಜುಮೇರಾಹ್ ಲೇಕ್ ಟವರ್ಸ್ ನಲ್ಲಿ ತಮ್ಮ ಪತಿ ಖಾದರ್ ಕುಕ್ಕಾಡಿ (69) ಜತೆ ವಾಸವಾಗಿದ್ದರು. ದುಬೈಯಲ್ಲಿ ಕಳೆದ ಶುಕ್ರವಾರ ರಝೀನಾ ಅವರ ಸ್ಮರಣೆ ಸಮಾರಂಭದಲ್ಲಿ ತಮ್ಮ ಪತ್ನಿಯನ್ನು ನೆನೆದು  ಖಾದರ್ ಭಾವಪರವಶರಾದರು.

''ಆಕೆ ಎಲ್ಲಾ ರೀತಿಯಲ್ಲಿ ಪರಿಪೂರ್ಣರಾಗಿದ್ದರು, ಯಾರಿಗೂ ಕೆಟ್ಟದ್ದನ್ನು ಬಯಸದವರಾಗಿದ್ದರು'' ಎಂದು ಖಾದರ್ ಹೇಳಿದರು. ''ದೇವರು ತನಗೆ ಪ್ರೀತಿಪಾತ್ರರಾದವರನ್ನು ಆದಷ್ಟು ಬೇಗ ಕರೆಸಿಕೊಳ್ಳುತ್ತಾರೆಂದು ಹೇಳಿ ಹಲವು ಜನರು ನನಗೆ ಸಮಾಧಾನಿಸಲು ಯತ್ನಿಸಿದ್ದಾರೆ. ಆದರೆ ಅದು ಆಕೆಯ ದುರಂತ ಅಂತ್ಯಕ್ಕೆ ಉತ್ತರವಲ್ಲ'' ಎಂದು ಖಾದರ್ ಹೇಳಿದರು.

ಈ ಬಗ್ಗೆ thenational ಪತ್ರಿಕೆಯ ತುಫೈಲ್ ಮುಹಮ್ಮದ್ ವರದಿ ಮಾಡಿದ್ದಾರೆ.

''ಆಕೆ ನನ್ನ ಪಾಲಿಗೆ ಬಹಳ ವಿಶೇಷವಾಗಿದ್ದರು. ಹಲವು ಜನರ ಆರೈಕೆಯನ್ನು ಆಕೆ ಮಾಡಿದ್ದರು. ತನ್ನ ಸಮುದಾಯಕ್ಕೆ ಆಕೆ ಮಾಡಬೇಕಾಗಿರುವುದು ಇನ್ನಷ್ಟಿತ್ತು. ಆಕೆಯ ಸಾವು ಆಕೆಯನ್ನು ಶಹೀದ್ (ಹುತಾತ್ಮ) ಆಗಿಸಿದೆ ಎಂದು ಜನ ಹೇಳುತ್ತಾರೆ, ಆದರೆ ಯಾವ ಉದ್ದೇಶಕ್ಕಾಗಿ ?'' ಎಂದು ಖಾದರ್ ಮಾರ್ಮಿಕವಾಗಿ ಪ್ರಶ್ನಿಸಿದರು.

ವೃತ್ತಿಯಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿರುವ ಹಾಗೂ ಟೆಕ್ಸಾಸ್ ನಿವಾಸಿಯಾಗಿರುವ ರಝೀನಾ ಅವರ ಪುತ್ರಿ ಫರ್ಹಾ ಕುಕ್ಕಾಡಿ (35) ಕೂಡ ಸಭೆಯಲ್ಲಿ ಹಾಜರಿದ್ದು ತಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

''ವಯಸ್ಸು, ಅಂತಸ್ತು ಯಾ ಸ್ಥಾನಮಾನ ನೋಡದೆ ಎಲ್ಲರೊಡನೆ ಸ್ನೇಹದಿಂದಿದ್ದವರು ನನ್ನ ತಾಯಿ. ತಮ್ಮೊಂದಿಗೆ ಕಠೋರವಾಗಿ ವರ್ತಿಸಿದವರನ್ನೂ ಆಕೆ ಕ್ಷಮಿಸಿದ್ದರು. ಆಕೆ ಪ್ರೀತಿಯ ಸಾಕಾರಮೂರ್ತಿಯಾಗಿದ್ದರು,'' ಎಂದು ಫರ್ಹಾ ಹೇಳಿದರು.

ರಝೀನಾ ಮತ್ತು ಖಾದರ್ ಕುಕ್ಕಾಡಿ ಶ್ರೀಲಂಕಾದಲ್ಲಿ ಒಂದು ವಾರಕ್ಕಿಂತಲೂ ಹೆಚ್ಚು ಕಾಲ ಪ್ರವಾಸದಲ್ಲಿದ್ದ ಸಂದರ್ಭ ಶಾಂಗ್ರಿ ಲಾ ಹೋಟೆಲಿನಲ್ಲಿ ಅವರು ತಂಗಿದ್ದರು. ಈಸ್ಟರ್ ಭಾನುವಾರ ಬೆಳಗ್ಗೆ  ಖಾದರ್ ಕುಕ್ಕಾಡಿ ದುಬೈಯಲ್ಲಿನ ತಮ್ಮ ಪ್ರಾಜೆಕ್ಟ್ ಡೈರೆಕ್ಟರ್ ಉದ್ಯೋಗ ನಿಮಿತ್ತ ಮರಳಿದ್ದರು. ತಮ್ಮ 61ನೇ ಹುಟ್ಟುಹುಬ್ಬವನ್ನು ಕೆಲವೇ ದಿನಗಳಲ್ಲಿ ಆಚರಿಸಲಿದ್ದ ರಝೀನಾ ಮರುದಿನ ಭಾರತಕ್ಕೆ ಮರಳಲಿದ್ದರು. ಅತ್ತ ಅಬ್ದುಲ್ ಖಾದರ್ ಶ್ರೀಲಂಕಾದಿಂದ ಹೊರಟಿದ್ದ ವಿಮಾನ ದುಬೈಗೆ ತಲಪುವಷ್ಟರ ಹೊತ್ತಿಗೆ ಅವರ ಪತ್ನಿಯ ಸಾವಿನ ಸುದ್ದಿ ಅವರಿಗೆ ಬರಸಿಡಿಲಿನಂತೆ ಎರಗಿತ್ತು. ಅವರು ಮತ್ತೆ ಶ್ರೀಲಂಕಾಗೆ ತಮ್ಮ ಸೋದರ ಮತ್ತು ಸೋದರಳಿಯನ ಜತೆ ತೆರಳಿದ್ದರು. ಇದು ತಮ್ಮ ಜೀವನದ ಅತ್ಯಂತ ಕಠಿಣ ಪಯಣವಾಗಿತ್ತು ಎಂದು ಅವರು ನೆನಪಿಸುತ್ತಾರೆ.

''ಪಯಣದ ವೇಳೆ ಹಲವು ಯೋಚನೆಗಳು ಮನದಲ್ಲಿ ಸುಳಿದಿದ್ದವು. ತಕ್ಷಣದ  ಪ್ರತಿಕ್ರಿಯೆ  ದುಃಖಕ್ಕಿಂತ  ಆಕ್ರೋಶವೇ ಹೆಚ್ಚಾಗಿತ್ತು. ನನ್ನ ಪ್ರೀತಿಯ ರಝೀನಾ ನಿಶ್ಚಲಳಾಗಿ ಮಲಗಿದ್ದನ್ನು ನೋಡಿದಾಗ ಆಘಾತವಾಗಿತ್ತು. ಆಕೆಯ ಮೊಗದಲ್ಲಿ ನಗುವಿತ್ತು ಆದರೆ ಎಲ್ಲೂ ಗಾಯಗಳ ಗುರುತಿರಲಿಲ್ಲ. ನನ್ನ ಮೇಲೆ ಹಾಗೂ ಸಾವಿಗೆ ಕಾರಣರಾದವರ ಮೇಲೆ ನನಗೆ ಆಕ್ರೋಶ ಮೂಡಿತ್ತು. ಆದರೆ ನಿಸ್ಸಹಾಯಕನಾಗಿದ್ದೆ, ಅಳುವುದೂ ಸಾಧ್ಯವಾಗಲಿಲ್ಲ, ಅಲ್ಲಿ ಯಾವುದೇ ಭದ್ರತಾ ವ್ಯವಸ್ಥೆಯೇ ಇರಲಿಲ್ಲ. ದಾಳಿಕೋರರು ಹೋಟೆಲಿನಲ್ಲಿಯೇ ರಾತ್ರಿ ತಂಗಿ ಮರುದಿನ ಸ್ಫೋಟ ನಡೆಸಿದ್ದರು ಎಂದು ಊಹಿಸುವುದೂ ಕಷ್ಟ'' ಎಂದು ಖಾದರ್ ಹೇಳಿದರು.

ದುರಂತದ ಮರುದಿನ ಕೊಲಂಬೋದ ಮಸೀದಿಯೊಂದರಲ್ಲಿ  ಕುಟುಂಬ ವರ್ಗ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ರಝೀನಾರ ದಫನ ಕಾರ್ಯ ನಡೆದಿತ್ತು. ದಂಪತಿಯ ಪುತ್ರ ಖಾನ್ಫರ್ (38) ಕ್ಯಾಲಿಫೋರ್ನಿಯಾದಲ್ಲಿ ಇಂಜಿನಿಯರ್ ಆಗಿದ್ದು ಕೊಲಂಬೋಗೆ ಆಗಮಿಸುವಷ್ಟರಲ್ಲಿ ದಫನ ನಡೆದಿದ್ದರಿಂದ ಕೊನೆಯ ಬಾರಿ ತಾಯಿಯ ಮುಖವನ್ನೊಮ್ಮೆ ನೊಡುವ ಅವಕಾಶ ಕಳೆದುಕೊಂಡು ಇನ್ನಷ್ಟು ದುಃಖಕ್ಕೀಡಾಗಿದ್ದರು. ದಾಳಿ ನಡೆಯುವ ಅರ್ಧ ಗಂಟೆ ಮೊದಲು ಅವರು ತಾಯಿಯ ಜತೆ ದೂರವಾಣಿಯಲ್ಲಿ ಮಾತನಾಡಿದ್ದರು.

ರಝೀನಾ ಸ್ಮರಣಾರ್ಥ ಏನಾದರೂ ಸೇವಾ ಯೋಜನೆ ಹಮ್ಮಿಕೊಳ್ಳುವ  ಬಗ್ಗೆ ಕುಟುಂಬ ಯೋಚಿಸುತ್ತಿದೆ ಆದರೆ ಇನ್ನೂ ಯಾವುದೂ ಅಂತಿಮಗೊಂಡಿಲ್ಲ.
ರಝೀನಾ ಅವರಿಲ್ಲದ ಜೀವನವನ್ನು ಊಹಿಸುವುದಕ್ಕೂ ಕುಟುಂಬಕ್ಕೆ ಅಸಾಧ್ಯವಾಗುತ್ತಿದೆ. ''ನನ್ನ ಎರಡು ವರ್ಷದ ಪುತ್ರಿ ಮಿಲಾ ಕಳೆದ ನವೆಂಬರ್ ತಿಂಗಳಲ್ಲಿ ಅಮೆರಿಕಾಗೆ ಬಂದಿದ್ದ ಅಜ್ಜಿಯ ಮೇಲೆ ಅತೀವ ಮಮತೆ ಹೊಂದಿದ್ದಳು, ಅಜ್ಜಿ ಕಳುಹಿಸಿದ ಫೋಟೊಗಳನ್ನು ತೋರಿಸುವಂತೆ ಯಾವತ್ತೂ ಹೇಳುತ್ತಿರುತ್ತಾಳೆ. ಈಗ ಅವಳು ಕೇಳಿ ನಾನು ತೋರಿಸದೇ ಇದ್ದರೆ ಕಳವಳಗೊಳ್ಳುತ್ತಾಳೆ'' ಎಂದು ಹೇಳುತ್ತಾರೆ ಖಾನ್ಫರ್. 

ಕೃಪೆ : thenational.ae

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News