ಕುಂದಗೋಳ: ಮನೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಮೃತ್ಯು

Update: 2019-05-14 12:20 GMT
ಚಿತ್ರ ಕೃಪೆ: ANI

ಹುಬ್ಬಳ್ಳಿ, ಮೇ 14: ಮನೆ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರು ಮೃತಪಟ್ಟಿರುವ ಘಟನೆ ಕುಂದಗೋಳದ ಯರಗುಪ್ಪಿಯಲ್ಲಿ ಸೋಮವಾರ ರಾತ್ರಿ ನಡೆದಿದ್ದು, ಘಟನೆ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಯಲ್ಲಪ್ಪಗರಟ್ಟಿ ಅವರ ಪತ್ನಿ ಯಲ್ಲವ್ವ (56), ಮೊಮ್ಮಕ್ಕಳಾದ ಶ್ರಾವಣಿ (6), ಜ್ಯೋತಿ (4) ಮೃತಪಟ್ಟವರು. ಮೃತರ ಪಾರ್ಥೀವ ಶರೀರಗಳನ್ನು ಇರಿಸಿದ್ದ ಯರಗುಪ್ಪಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಿವಕುಮಾರ್, ಪುಷ್ಪಮಾಲೆ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.

ಈ ಭಾಗದಲ್ಲಿ ಅನೇಕ ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ಈಗ ಚಾಲ್ತಿಯಲ್ಲಿರುವ ಸರಕಾರಿ ವಸತಿ ಯೋಜನೆಗಳ ಅಡಿ ಪುನರ್ವಸತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏನನ್ನೂ ಪ್ರಕಟಿಸಲು ಹೋಗುವುದಿಲ್ಲ ಎಂದು ಶಿವಕುಮಾರ್ ತಿಳಿಸಿದರು. ಇದೇ ಸಂದರ್ಭದಲ್ಲಿ ಮನೆ ಕುಸಿದು ಬಿದ್ದ ಸ್ಥಳಕ್ಕೂ ಅವರು ಭೇಟಿ ನೀಡಿದರು.

ಕುಂದಗೋಳ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News