×
Ad

ಮೇ 23ರ ಬಳಿಕ ಕಾಂಗ್ರೆಸ್ ನ 20 ಶಾಸಕರು ಬಿಜೆಪಿಗೆ: ಯಡಿಯೂರಪ್ಪ

Update: 2019-05-14 17:53 IST

ಕಲಬುರಗಿ, ಮೇ 14: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷದ 20ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ವಿಪಕ್ಷ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ. 

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಪ್ರಚಾರಕ್ಕಾಗಿ ಅಥವಾ ಮೈತ್ರಿ ಸರಕಾರ ಅಸ್ಥಿರಗೊಳಿಸುವ ದುರುದ್ದೇಶದಿಂದ ಈ ಮಾತುಗಳನ್ನು ಹೇಳುತ್ತಿಲ್ಲ. ಸಿಎಂ ಕುಮಾರಸ್ವಾಮಿ ನಾಯಕತ್ವದ ವಿರುದ್ಧ ಅಸಮಾಧಾನಿತ ಶಾಸಕರು ಯಾವುದೇ ಕ್ಷಣದಲ್ಲಿ ತಮ್ಮ ರಾಜೀನಾಮೆ ನೀಡಬಹುದು ಎಂದು ಹೇಳಿ ಅಚ್ಚರಿ ಮೂಡಿಸಿದರು.

ಮೇ 23ರ ಚುನಾವಣಾ ಫಲಿತಾಂಶದ ನಂತರ ಮೈತ್ರಿ ಸರಕಾರದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಲಿದೆ ಎಂದು ನುಡಿದ ಯಡಿಯೂರಪ್ಪ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮೊದಲು ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ವೇಣುಗೋಪಾಲ್ ಗೆ ರಾಜ್ಯದ ಸ್ಥಿತಿಗತಿ ಗೊತ್ತಿಲ್ಲ. ಅವರು ಯಾವುದೇ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ಕೊಟ್ಟಿಲ್ಲ. ರಾಜ್ಯದಲ್ಲಿ ಅವರು ಎರಡಂಕಿ ದಾಟುವುದಿಲ್ಲ ಎಂದ ಅವರು, ಯಾವ ಶಾಸಕರೂ ಕಾಂಗ್ರೆಸ್ ಕಡೆ ಮುಖ ಮಾಡುವುದಿಲ್ಲ. ಅದು ಮುಳುಗುವ ಹಡಗು ಎಂದು ವಾಗ್ದಾಳಿ ನಡೆಸಿದರು. ಕುಂದಗೋಳ ಮತ್ತು ಚಿಂಚೋಳಿಯಲ್ಲಿ ನಮ್ಮ ಪಕ್ಷದ ಪರ ಗೆಲುವಿಗೆ ಪೂರಕವಾದ ವಾತಾವರಣವಿದೆ. ಎರಡು ಕಡೆ ನಮ್ಮ ಅಭ್ಯರ್ಥಿಗಳು ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಈ ಚುನಾವಣೆಯ ಫಲಿತಾಂಶದಿಂದ ಮೈತ್ರಿ ಸರಕಾರ ಬೀಳಲಿದೆ ಎಂದರು.

ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ನಡುವಿನ ಜಗಳ ನೋಡಿದರೆ ಈ ಸರಕಾರ ಹೆಚ್ಚು ದಿನ ಬಾಳುವುದಿಲ್ಲ. ದೊಡ್ಡ ಪಕ್ಷವಾಗಿರುವ ಬಿಜೆಪಿ ವಿಪಕ್ಷದ ಸ್ಥಾನದಲ್ಲಿ ಕುಳಿತು ಜನರ ಪರವಾಗಿ ಕೆಲಸ ಮಾಡುತ್ತಿದೆ. ಆಡಳಿತ ಪಕ್ಷದ ಕೆಲಸವನ್ನು ವಿಪಕ್ಷ ಮಾಡುತ್ತಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News