ತುಮಕೂರಿನಲ್ಲಿ ಸರಣಿ ರಸ್ತೆ ಅಪಘಾತ: 25ಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ ಗಾಯ
ತುಮಕೂರು, ಮೇ 14: ನಗರದ ಹೊರವಲಯದ ಊರುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೆಳ್ಳಂಬೆಳಗ್ಗೆ ಕಾರು, ಲಾರಿ ಮತ್ತು ಬಸ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಸುಮಾರು 25ಕ್ಕೂ ಅಧಿಕ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇಂದು ಬೆಳಗ್ಗೆ ತುಮಕೂರು ನಗರದಿಂದ ಸಿರಾಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್‍ಗೆ ಊರುಕೆರೆ ಬಳಿ ಹಿಂದಿನಿಂದ ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ಅಪ್ಪಳಿಸಿದ್ದರಿಂದ ಈ ಕಾರಿನಲ್ಲಿದ್ದ ಮಹಿಳೆಯೊಬ್ಬರಿಗೆ ತೀವ್ರ ಗಾಯವಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ವೃತ್ತ ಸರ್ಕಲ್ ಇನ್ಸ್ ಪೆಕ್ಟರ್ ಮಧುಸೂಧನ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದರು. ಅಷ್ಟರಲ್ಲಿ ಬೆಂಗಳೂರು ಕಡೆಯ ಮತ್ತೊಂದು ಕಾರು ಅಪಘಾತ ನಡೆದಿರುವುದನ್ನು ಗಮನಿಸದೆ ಅತಿ ವೇಗವಾಗಿ ಬಂದಿದೆ. ಅಪಘಾತ ನಡೆದ ಸ್ಥಳದ ಸಮೀಪಕ್ಕೆ ಬಂದ ನಂತರ ಕಾರನ್ನು ಚಾಲಕ ಬಲಭಾಗಕ್ಕೆ ತಿರುಗಿಸಿದ್ದಾರೆ. ಕಾರು ಬಲಭಾಗಕ್ಕೆ ತಿರುಗುತ್ತಿದ್ದಂತೆ ಹಿಂದಿನಿಂದ ಬಲಭಾಗದಲ್ಲಿ ಮೀನು ತುಂಬಿಕೊಂಡು ಬರುತ್ತಿದ್ದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದೆ. ಈ ಪರಿಣಾಮ ಲಾರಿಯಲ್ಲಿದ್ದ ಮೀನುಗಳು ರಸ್ತೆಗೆ ಬಿದ್ದಿವೆ. ಅದೇ ಸಮಯಕ್ಕೆ ಸಿರಾ ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಲಾರಿಯ ಚಾಲಕ ರಸ್ತೆಗೆ ಮೀನುಗಳನ್ನು ಬಿದ್ದಿರುವುದನ್ನು ಕಂಡು ಲಾರಿಯನ್ನು ನಿಧಾನಗತಿಯಲ್ಲಿ ಚಲಾಯಿಸುತ್ತಿದ್ದ. ಈ ವೇಳೆ ಲಾರಿಯ ಹಿಂದೆ ಬೆಳಗಾವಿಯಿಂದ ಬರುತ್ತಿದ್ದ ಸೀಬರ್ಡ್ ಖಾಸಗಿ ಬಸ್ ಮುಂದಿದ್ದ ಲಾರಿಗೆ ಅಪ್ಪಳಿಸಿದ್ದರಿಂದ ಬಸ್‍ನಲ್ಲಿದ್ದ ಸುಮಾರು 25ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಬಸ್ ಲಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಬಸ್‍ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.
ಬಸ್‍ನಲ್ಲಿದ್ದ ಪ್ರಯಾಣಿಕರಾದ ರಂಗನಾಥ್, ನಂದೀಶ್, ನಯಾಝ್, ಭರತ್, ಅವಿನಾಶ್, ಸುರೇಶ್, ಬಸವರಾಜು, ವರದಮಾನ್, ಹಾಲಪ್ಪಮಚ್ಚಂಡಿ, ರಾಜೇಂದ್ರ ಕಾಂಬಳೆ, ಶುಭಗಿಣಿ, ರಝಿಯಾ ನಿಝಾಂ, ಶಿರಿನ್, ಶ್ರೀದೇವಿ, ಭಾರ್ಗವಿ, ವಿದ್ಯಾದೇಶಪಾಂಡೆ, ಸತೀಶ್, ರಾಜಶ್ರೀ, ಸಂತೋಷ್, ಕನ್‍ಚನ್ ಮಿಶ್ರ, ಆರ್.ಹೆಚ್. ಕುಲಕರ್ಣಿ ಸೇರಿದಂತೆ 25ಕ್ಕೂ ಅಧಿಕ ಮಂದಿಗೆ ತೀವ್ರ ಪೆಟ್ಟಾಗಿದ್ದು, ಇವರ ಪೈಕಿ ಇಬ್ಬರ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರು ಸ್ಥಳಕ್ಕೆ ಧಾವಿಸಿ ತುರ್ತು ವಾಹನಗಳನ್ನು ಸ್ಥಳಕ್ಕೆ ಕರೆಸಿ ಕ್ಷಣಾರ್ಧದಲ್ಲಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ಗಾಯಾಳುಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಅಪಘಾತದಲ್ಲಿ ಗಾಯಗೊಂಡವರಿಗೆ ಶುಶ್ರೂಷೆ ಮಾಡುವಲ್ಲಿ 108 ವಾಹನದ ಸಿಬ್ಬಂದಿಗಳು ಸಹ ಶ್ರಮಿಸುವ ಮೂಲಕ ಮಾನವೀಯತೆ ಮೆರೆದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಡಿವೈಎಸ್ಪಿ ತಿಪ್ಪೇಸ್ವಾಮಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಗುತ್ತಿರುವ ಗಾಯಾಳುಗಳನ್ನು ಯೋಗ ಕ್ಷೇಮವನ್ನು ವಿಚಾರಿಸಿದರು.
ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.