ಮತ್ತೆ ಜೈಲಿಗೆ ಹೋಗಲು ಬಿಎಸ್‌ವೈ ಸಿಎಂ ಆಗಬೇಕೇ?: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2019-05-14 12:57 GMT

ಹುಬ್ಬಳ್ಳಿ, ಮೇ 14: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಸರಕಾರ ಪತನಗೊಳ್ಳಲಿದ್ದು, ನಾನೇ ಮುಖ್ಯಮಂತ್ರಿಯಾಗುವುದು ಎಂದು ಬಿಎಸ್‌ವೈ ಹೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಕೆಲಸ ಮಾಡದ ಅವರು, ಮತ್ತೆ ಕಾರಾಗೃಹಕ್ಕೆ ಹೋಗಲು ಸಿಎಂ ಆಗಬೇಕೇ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳವಾರ ಇಲ್ಲಿನ ಕುಂದಗೋಳದ ಅರಳಿಕಟ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಹುಮತವಿಲ್ಲದೆ ಅಧಿಕಾರ ಸ್ವೀಕರಿಸಿ ಮೂರು ದಿನದಲ್ಲೆ ರಾಜೀನಾಮೆ ನೀಡಿದ ಬಿಎಸ್‌ವೈ ಕನಸಿನಲ್ಲಿ ವಿಧಾನಸೌಧದ 3ನೆ ಮಹಡಿಯನ್ನೆ ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರು ಸಿಎಂ ಆಗುವುದಿಲ್ಲ ಎಂದು ಹೇಳಿದರು.

ಜನರ ತೀರ್ಪಿಗೆ ಬದ್ಧರಾಗಿ ಬಾಯಿ ಮುಚ್ಚಿಕೊಂಡು ವಿಪಕ್ಷದಲ್ಲಿ ಕೆಲಸ ಮಾಡಬೇಕು. ಆದರೆ, ಈ ಮಾನಗೆಟ್ಟ ಮತ್ತು ಲಜ್ಜೆಗೆಟ್ಟ ಬಿಜೆಪಿಯವರು ಮೇ 23ರ ಬಳಿಕ ನಮ್ಮ ಸರಕಾರ ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಮೂರೂ ಬಿಟ್ಟಿರುವ ಇವರಿಗೆ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಅವಧಿಯಲ್ಲಿ ರೈತರ ಸಾಲಮನ್ನಾಕ್ಕೆ ಆಗ್ರಹಿಸಿದರೆ ‘ನೋಟು ಮುದ್ರಣ ಯಂತ್ರವಿಲ್ಲ’ ಎಂದಿದ್ದ ಬಿಎಸ್‌ವೈ, ನೋಟು ಎಣಿಸುವ ಯಂತ್ರ ಇಟ್ಟುಕೊಂಡಿದ್ದರು. ಈಶ್ವರಪ್ಪ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ನೋಟು ಎಣಿಸುವ ಯಂತ್ರ ಸಿಕ್ಕಿತ್ತು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

50 ಕೋಟಿ ರೂ.ಗೆ ಜಾಧವ್ ಡೀಲ್: ಕಲಬುರಗಿ ಕ್ಷೇತ್ರದಲ್ಲಿ ಖರ್ಗೆ ವಿರುದ್ಧ ಕಣಕ್ಕಿಳಿದಿರುವ ಗಿರಾಕಿ ಉಮೇಶ್ ಜಾಧವ್ 50 ಕೋಟಿ ರೂ.ಗೆ ಡೀಲ್ ಆಗಿದ್ದಾನೆ. ಸಾಲದಕ್ಕೆ ಮಗನಿಗೂ ಉಪ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದಾನೆ. ಅವರಿಬ್ಬರೂ ಸೋಲುವುದು ಖಚಿತ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಬೆಂಕಿ ಹಚ್ಚುವುದೆ ಶೆಟ್ಟರ್ ಕೆಲಸ: ಮಾಜಿ ಸಿಎಂ ಶೆಟ್ಟರ್ ಮಹಾನ್ ಸುಳ್ಳುಗಾರ. ಕಾಂಗ್ರೆಸ್-ಜೆಡಿಎಸ್ ಮಧ್ಯೆ ಬೆಂಕಿ ಹಚ್ಚುವುದೇ ಅವರ ಕೆಲಸ ಎಂದ ಅವರು, ಮಂಡ್ಯದಲ್ಲಿ ಸುಮಲತಾಗೆ ಸಿದ್ದರಾಮಯ್ಯ ಬೆಂಬಲಿಸಿ, ಮತ್ತೆ ಸಿಎಂ ಆಗಲು ಕಾರ್ಯಾಚರಣೆ ನಡೆಸಿದ್ದಾರೆಂಬ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News