ಸುಮಲತಾ ಪಕ್ಷೇತರರಾಗಿ ಸ್ಪರ್ಧೆಯ ಹಿಂದೆ ಸಿದ್ದರಾಮಯ್ಯ ಇದ್ದಾರೆ: ಜಗದೀಶ್ ಶೆಟ್ಟರ್

Update: 2019-05-14 14:12 GMT
ಜಗದೀಶ್ ಶೆಟ್ಟರ್- ಸಿದ್ದರಾಮಯ್ಯ

ಹುಬ್ಬಳ್ಳಿ, ಮೇ 14: ರಾಜ್ಯದಲ್ಲಿ ಮೈತ್ರಿ ಸರಕಾರಕ್ಕೆ ಸಿದ್ದರಾಮಯ್ಯ ಟೈಮ್ ಬಾಂಬ್ ಫಿಕ್ಸ್ ಮಾಡಿದ್ದಾರೆ. ಮೇ 23ರ ಬಳಿಕ ಅವರು ಬಟನ್ ಒತ್ತುತ್ತಿದ್ದಂತೆ ಎಲ್ಲ ಸ್ಫೋಟವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಎಲ್ಲ ಗೊಂದಲಗಳಿಗೆ ಸಿದ್ದರಾಮಯ್ಯನವರೇ ಕೇಂದ್ರ ಬಿಂದು. ಮಿತ್ರ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟ ಈಗ ಹೊರಗೆ ಬರುತ್ತಿದೆ ಎಂದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪುತ್ರ, ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲ. ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿಯುವುದರ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಆದುದರಿಂದಲೇ, ಸಿದ್ದರಾಮಯ್ಯ ಆಪ್ತರು ಸುಮಲತಾ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದು ಎಂದು ಅವರು ದೂರಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಿದ್ದರಾಮಯ್ಯ ಬಗ್ಗೆ ನೀಡುತ್ತಿರುವ ಹೇಳಿಕೆಗಳ ಹಿಂದಿನ ನಿರ್ದೇಶಕ ಮುಖ್ಯಮಂತ್ರಿ ಕುಮಾರಸ್ವಾಮಿ. ತಾವು ಹೇಳಲು ಸಾಧ್ಯವಾಗದಿದ್ದನ್ನು ವಿಶ್ವನಾಥ್ ಮೂಲಕ ಹೇಳಿಸಿದ್ದಾರೆ. ಆಡಳಿತ ನಡೆಸುತ್ತಿರುವ ಉಭಯ ಪಕ್ಷಗಳ ಆಂತರಿಕ ಕಚ್ಚಾಟ, ಈಗ ಬಹಿರಂಗವಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಮೈತ್ರಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಮಾಡಲು ಕುಮಾರಸ್ವಾಮಿ ನಿನ್ನೆ ಕುಂದಗೋಳಕ್ಕೆ ಬಂದಿರಲಿಲ್ಲ. ತಮ್ಮ ಪಕ್ಷದ ಕಾರ್ಯಕರ್ತನ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಮದುವೆಯಲ್ಲಿ ಅಕ್ಕಿ ಕಾಳು ಹಾಕುವ ಜೊತೆಗೆ, ಮೈತ್ರಿ ಸರಕಾರದ ಅಸ್ತಿತ್ವಕ್ಕೂ ಅಕ್ಕಿ ಕಾಳು ಹಾಕಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಳಿಕ, ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಉಪಚುನಾವಣೆ ನಡೆಸುವ ಪರಿಸ್ಥಿತಿ ಬರುತ್ತದೆ ಎಂದರು.

ಈ ಮೈತ್ರಿ ಸರಕಾರ ಹೆಚ್ಚು ದಿನ ಇರುವುದಿಲ್ಲ. ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಗೊಂದಲದಲ್ಲಿದೆ. ಉಭಯ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲದೆ, ಕಚ್ಚಾಡುತ್ತಿದ್ದಾರೆ. ಇದರಿಂದ, ರಾಜ್ಯದ ಜನತೆಯೂ ಬೇಸರಗೊಂಡಿದ್ದಾರೆ ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ವಾಮಮಾರ್ಗ ಅನುಸರಿಸುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್, ನಮ್ಮ ಕಾರ್ಯಕರ್ತರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಅಲ್ಲದೆ, ಕೆಲವರನ್ನು ಸಂಪರ್ಕಿಸಿ ಹಣದ ಆಮಿಷ ತೋರಿಸುತ್ತಿದ್ದಾರೆ. ಗುಂಡ್ಲುಪೇಟೆಯಲ್ಲಿ ವಾಹನದ ಟೈರ್‌ನಲ್ಲಿ ಹಣ ತಂದು ಹಂಚಿದ್ದರು. ಅದೇ ರೀತಿ ಇಲ್ಲಿಯೂ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಿಜೆಪಿಯ 20 ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದಾರೆ. ನಮ್ಮ ಪಕ್ಷದಿಂದ 20 ಜನ ಶಾಸಕರು ಹೋದರೂ, ಕಾಂಗ್ರೆಸ್‌ನವರು ಜೆಡಿಎಸ್ ಬೆಂಬಲವಿಲ್ಲದೆ, ಸರಕಾರ ರಚಿಸಲು ಸಾಧ್ಯವಿಲ್ಲ. ಆಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಈ ಪೈಕಿ ಯಾರನ್ನ ಅವರು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಅರವಿಂದ ಲಿಂಬಾವಳಿ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News