ಸಮ್ಮಿಶ್ರ ಸರಕಾರ ಜನಪರವಾಗಿದೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-05-14 14:28 GMT

ಹುಬ್ಬಳ್ಳಿ, ಮೇ 14: ರಾಜ್ಯದ ಸಮ್ಮಿಶ್ರ ಸರಕಾರವು ಜನಪರವಾಗಿ ಕೆಲಸ ಮಾಡುತ್ತಿದ್ದು, ಮೇ 22ರಂದು ಒಂದು ವರ್ಷ ಪೂರೈಸಲಿದೆ. ಈ ಸರಕಾರಕ್ಕೆ ಇನ್ನೂ ಹೆಚ್ಚಿನ ಶಕ್ತಿ ತುಂಬಬೇಕಾದರೆ, ಕುಸುಮಾ ಶಿವಳ್ಳಿಯನ್ನು ನೀವೆಲ್ಲ ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರಕಾರವನ್ನು ಅಸ್ತಿರಗೊಳಿಸಲು ಬಿಜೆಪಿಯವರು ಮತ ಕೇಳುತ್ತಿದ್ದಾರೆ. ಈ ಹಿಂದೆ ಐದು ವರ್ಷ ಆಡಳಿತ ನಡೆಸಿದ ಬಿಜೆಪಿ, ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಆಪರೇಷನ್ ಕಮಲದ ಮೂಲಕ ಶಿವಳ್ಳಿಯನ್ನು ಸೆಳೆಯಲು ಬಿಜೆಪಿಯವರು ಪ್ರಯತ್ನಿಸಿದ್ದರು. ಈ ವಿಚಾರವನ್ನು ಅವರು ಬದುಕಿದ್ದಾಗಲೇ ಹೇಳಿಕೊಂಡಿದ್ದರು. ಶಾಸಕರಾಗಿ ಶಿವಳ್ಳಿ ದುಡ್ಡು ಮಾಡಿದವರಲ್ಲ. ಅದರ ಬದಲು ಕ್ಷೇತ್ರದಲ್ಲಿ ಜನರ ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಬಿಜೆಪಿಯವರಿಂದ ನಾನು ಕಲಿಯಬೇಕಾಗಿರುವುದು ಏನು ಇಲ್ಲ. ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರ ಸರಕಾರವು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಮಾಧ್ಯಮಗಳಲ್ಲಿ ಬರುವ ವರದಿಗಳಿಂದ ನಾನು ಹೆದರುವುದಿಲ್ಲ. ಕೆಲ ಮಾಧ್ಯಮಗಳು ಜನರಿಗೆ ನಷ್ಟವನ್ನುಂಟು ಮಾಡುತ್ತಿವೆ. ಆದುದರಿಂದಲೇ, ನಾನು ನಿಮ್ಮ ಜೊತೆ ಮಾತನಾಡುವುದನ್ನು ಬಿಟ್ಟಿದ್ದೇನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗಕ್ಕೆ ನಮ್ಮ ಸರಕಾರ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪವಾಗಿದೆ. ಬಡ ಕುಟುಂಬದ ತಂದೆ, ತಾಯಿ ಇಲ್ಲದ ಈ ಭಾಗದ ಹೆಣ್ಣು ಮಗಳನ್ನು 50 ಲಕ್ಷ ರೂ.ಖರ್ಚು ಮಾಡಿ, ವೈದ್ಯಕೀಯ ಪದವಿ ಓದಿಸುತ್ತಿದ್ದೇನೆ. ಇದು ನಾನು ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಇಲ್ಲಿ ರೌಡಿಸಂ ಮಾಡಲು ಕರೆ ತಂದಿಲ್ಲ. ನಮ್ಮ ಮೈತ್ರಿ ಅಭ್ಯರ್ಥಿಯಾಗಿರುವ ಕುಸುಮಕ್ಕರನ್ನು ಗೆಲ್ಲಿಸಲು ಶಿವಕುಮಾರ್ ಬಂದಿದ್ದಾರೆ. ಬಿಜೆಪಿಯವರ ಟೀಕೆಗಳಿಗೆಲ್ಲ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಬಡವರನ್ನು, ಅವರ ಕಷ್ಟಗಳನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ನಾವು ಕಟುಕರಲ್ಲ, ಹೃದಯಹೀನರಲ್ಲ. ಹೀಗಾಗಿ ನಮ್ಮ ಕಣ್ಣಲ್ಲಿ ನೀರು ಬರುತ್ತದೆ. ಡಿ.ಕೆ.ಶಿವಕುಮಾರ್ ಅವರ ಕಣ್ಣಲ್ಲಿ ಎಂದಿಗೂ ನೀರು ಬಂದಿರಲಿಲ್ಲ. ಆದರೆ, ತಮ್ಮ ಗೆಳೆಯ ಶಿವಳ್ಳಿಯನ್ನು ನೆನೆದು ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News