ನಾನು ಸನ್ಯಾಸಿಯಲ್ಲ, ಎಲ್ಲವನ್ನು ಕಾಲ ನಿರ್ಧರಿಸಲಿದೆ: ಡಿ.ಕೆ.ಶಿವಕುಮಾರ್

Update: 2019-05-14 14:30 GMT

ಹುಬ್ಬಳ್ಳಿ, ಮೇ 14: ಮುಖ್ಯಮಂತ್ರಿಯಾಗಬೇಕು ಎಂಬ ಆತುರ ನನಗಿಲ್ಲ. ರಾಜಕೀಯವಾಗಿ ನಾನು ಏನು ಸನ್ಯಾಸಿಯಲ್ಲ. ಎಲ್ಲವನ್ನು ಕಾಲ ನಿರ್ಧರಿಸಲಿದೆ. ಇನ್ನು ನಾಲ್ಕು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದೆ ನೋಡೋಣ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15-20 ವರ್ಷಗಳಿಂದ ಮುಖ್ಯಮಂತ್ರಿ ಆಗುತ್ತೇನೆ ಎಂದು ಭವಿಷ್ಯ ಹೇಳುತ್ತಿದ್ದಾರೆ. ಮೊದಲು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರೋಣ. ಆಮೇಲೆ ಪಕ್ಷದ ವರಿಷ್ಠರು ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ನಾನೇನು ಸನ್ಯಾಸಿಯಲ್ಲ. ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿಲ್ಲ ಎಂದು ಹೇಳಲ್ಲ. ಮಾಡುವ ಪ್ರಯತ್ನವನ್ನು ಮಾಡುತ್ತೇನೆ. ಫಲಿತಾಂಶ ದೇವರಿಗೆ ಬಿಟ್ಟದ್ದು. ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಶಿವಕುಮಾರ್ ಹೇಳಿದರು.

ಹುಟ್ಟುಹಬ್ಬ ಆಚರಿಸದಂತೆ ಮನವಿ: ರಾಜ್ಯದಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ಯಾರೂ ನನ್ನ ಹುಟ್ಟುಹಬ್ಬ(ಮೇ 15ರಂದು) ಆಚರಣೆ ಮಾಡಬಾರದು ಎಂದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಶಿವಕುಮಾರ್ ಮನವಿ ಮಾಡಿದರು.

ಕಳೆದ ವರ್ಷ ನನ್ನ ಹುಟ್ಟುಹಬ್ಬದ ದಿನ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಈ ವರ್ಷ ನಾನು ನನ್ನ ಗೆಳೆಯ ಶಿವಳ್ಳಿಯ ಕ್ಷೇತ್ರವಾದ ಕುಂದಗೋಳದಲ್ಲಿ ಉಪಚುನಾವಣೆಯಲ್ಲಿ ಮಗ್ನನಾಗಿದ್ದೇನೆ. ಹುಟ್ಟುಹಬ್ಬ ಆಚರಣೆ ನಿಮಿತ್ತ ಯಾರೂ ಹುಬ್ಬಳ್ಳಿಗೆ ಬರುವುದು ಬೇಡ. ಕಟೌಟ್ ಹಾಕುವುದಾಗಲಿ, ಕೇಕ್ ಕತ್ತರಿಸುವುದಾಗಲಿ ಮಾಡೋದು ಬೇಡ ಎಂದು ಅವರು ತಿಳಿಸಿದರು.

ಹುಟ್ಟುಹಬ್ಬದ ಅಂಗವಾಗಿ ನಾಳೆ ಬೆಳಗ್ಗೆ ನನ್ನ ಆರಾಧ್ಯದೈವ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರಕ್ಕೆ ಭೇಟಿ ನೀಡಲಿದ್ದೇನೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ನನ್ನ ಜೊತೆಯಿರಲಿ ಎಂದು ಶಿವಕುಮಾರ್ ಹೇಳಿದರು.

ಬಿಜೆಪಿಯವರು ತಮ್ಮನ್ನು ಗುರಿಯನ್ನಾಗಿಸಿಕೊಂಡು ಟೀಕೆ ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಕೆಲಸ ಆವರು ಮಾಡುತ್ತಿದ್ದಾರೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮಾವಿನ ಕಾಯಿ ಕೆಂಪಾದಾಗ ಮಾತ್ರ ಕಲ್ಲು ಹೊಡೆದು ಬೀಳಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿ, ಹೆಚ್ಚು ಕೆಲಸ ಮಾಡುವವರು ಹಾಗೂ ಪಕ್ವವಾಗಿರುವವರು ಅಂದರೆ ಹೆಚ್ಚಿನ ಜನ ಕಣ್ಣು ಹಾಕುತ್ತಾರೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಪದೇ ಪದೇ ಹೇಳಿಕೆ ನೀಡಿ ಮತದಾರರಿಗೆ ಆಸೆ ತೋರಿಸುತ್ತಿದ್ದಾರೆ. ಅವರ ಆಸೆಗೆ ನಾವೇಕೆ ಅಡ್ಡಿಯಾಗೋಣ, ಪಾಪ ಖುಷಿ ಪಡಲಿ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಯಿಂದ ಸರಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ದೀಕ್ಷೆಯನ್ನು ನಾನು ಹಾಗೂ ಸಿದ್ದರಾಮಯ್ಯ ಅನುಸರಿಸುತ್ತಿದ್ದೇವೆ. ದೇವೇಗೌಡರು ಕೊಟ್ಟ ದೀಕ್ಷೆಯನ್ನು ವಿಶ್ವನಾಥ್ ಸೇರಿದಂತೆ ಉಳಿದ ಜೆಡಿಎಸ್ ನಾಯಕರು ಅನುಸರಿಸಲಿ.

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News