ಶೆಟ್ಟರ್, ಬಿಎಸ್‌ವೈ ಉಳಿದಿದ್ದ ಹೊಟೇಲ್ ಗಳ ಮೇಲೇಕೆ ದಾಳಿ ನಡೆಸಿಲ್ಲ:? ಸಿದ್ದರಾಮಯ್ಯ ಪ್ರಶ್ನೆ
ಹುಬ್ಬಳ್ಳಿ, ಮೇ 14: ಐಟಿ ದಾಳಿ ಬಗ್ಗೆ ಆಕ್ಷೇಪವಿಲ್ಲ. ಆದರೆ, ದಾಳಿ ಮಾಡಿದ ಸಂದರ್ಭ ಯಾವುದು ಎಂಬುದು ಮುಖ್ಯ. ಶೆಟ್ಟರ್, ಬಿಎಸ್‌ವೈ ಉಳಿದಿದ್ದ ಹೊಟೇಲ್ ಕೊಠಡಿಗಳ ಮೇಲೇಕೆ ದಾಳಿ ನಡೆಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದರು.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೈತ್ರಿ ಸರಕಾರ ಪತನವಾಗಲಿದ್ದು ನಾನು ಸಿಎಂ ಆಗುತ್ತೇನೆಂಬ ಯಡಿಯೂರಪ್ಪರ ಮಾತನ್ನು ಜನತೆ ನಂಬುವುದಿಲ್ಲ. 104 ಸ್ಥಾನ ಪಡೆದಿದ್ದ ಅವರು ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ದು, ಅವರಿಗೆ ನಾಚಿಕೆಯಾಗಬೇಕೆಂದು ಲೇವಡಿ ಮಾಡಿದರು. ಒಂದು ಬಾರಿ ಹೇಳಿದರೆ ಅದನ್ನು ಜನ ನಂಬುತ್ತಾರೆ. ಆದರೆ, ಅದೇ ವಿಚಾರವನ್ನು ಪದೇ ಪದೇ ಹೇಳುತ್ತಿದ್ದರೆ ಯಾರೂ ನಂಬುವುದಿಲ್ಲ. ಅವರ ಹೇಳಿಕೆಗಳನ್ನು ಜನತೆ ಗಂಭೀರವಾಗಿಯೂ ಪರಿಗಣಿಸುವುದಿಲ್ಲ ಎಂದು ಟೀಕಿಸಿದರು.
ಚುನಾವಣೆಗೆ ನಿಲ್ಲುವುದಿಲ್ಲ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂದು ಕೆಲವು ಬೆಂಬಲಿಗರು ಹೇಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ನಿಲ್ಲುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದು ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದು ಸ್ಪಷ್ಟಣೆ ನೀಡಿದರು.
ಸಾರ್ವಜನಿಕ ಸಭೆಗಳಲ್ಲಿ ಅಭಿಮಾನಿಗಳು ನೀವೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾದರೆ 10ಕೆಜಿ ಅಕ್ಕಿ ಕೊಡ್ತೀನಿ ಅಂತ ಹೇಳಿಕೆ ನೀಡಿದ್ದೆ. ರಾಜ್ಯದ ಜನತೆ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿ ಆಗಬಾರದೇಕೆ ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಿದ್ದೇನೆ ಎಂದರು.