ಮೇ 23ರ ಬಳಿಕ ಮೋದಿಗೆ ‘ಮಹಾನ್ ಫೇಕ್ ಮಹಾರಾಜ’ ಹೆಸರು ಬರಲಿದೆ: ಬಿ.ಕೆ.ಹರಿಪ್ರಸಾದ್

Update: 2019-05-14 16:42 GMT

ಹುಬ್ಬಳ್ಳಿ, ಮೇ 14: ಲೋಕಸಭಾ ಚುನಾವಣೆಯ ಫಲಿತಾಂಶವು ಮೇ 23ರಂದು ಪ್ರಕಟವಾದ ನಂತರ ನರೇಂದ್ರಮೋದಿಗೆ ‘ಮಹಾನ್ ಫೇಕ್ ಮಹಾರಾಜ’ ಎಂಬ ಹೆಸರು ಬರಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಮೊದಲು ತಮ್ಮನ್ನು ಪ್ರಧಾನ ಸೇವಕ ಅಂದರು, ಆನಂತರ ಚೌಕಿದಾರ ಆದರು. ಮೇ 23ರ ನಂತರ ಅವರಿಗೆ ‘ಮಹಾನ್ ಫೇಕ್ ಮಹಾರಾಜ’ ಎಂಬ ಹೆಸರು ಬರಲಿದೆ ಎಂದರು.

ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋಡದ ವಿಜ್ಞಾನಿ ಆಗಿದ್ದರು. ಪ್ಲಾಸ್ಟಿಕ್ ಸರ್ಜರಿ ವಿಜ್ಞಾನಿಯೂ ಆಗಿದ್ದಾರೆ. ಅವರ ಪದವಿಯೂ ನಕಲಿ, ಅವರು ಕೊಟ್ಟಿರುವ ಕಾರ್ಯಕ್ರಮಗಳು ಕೂಡ ನಕಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ವಾಸ್ತವ್ಯ ಹೂಡಿರುವ ಹೊಟೇಲ್‌ಗಳ ಮೇಲೆ ಐಟಿ ದಾಳಿ ನಡೆದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐಟಿ, ಸಿಬಿಐ ಯಂತಹ ಪಕ್ಷಗಳ ಸಮ್ಮಿಶ್ರ ಸರಕಾರವೇ ಎನ್‌ಡಿಎ ಮೈತ್ರಿಕೂಟ ಆಗಿದೆ. ರಾಜಕೀಯ ದಾಳಕ್ಕಾಗಿ ಕೇಂದ್ರ ಸರಕಾರ ಐಟಿ ಹಾಗೂ ಇಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಹರಿಪ್ರಸಾದ್ ಆರೋಪಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಭವಿಷ್ಯವು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿರ್ಣಯದ ಮೇಲೆ ನಿಂತಿದೆ. ಅವರನ್ನು ಹೊರತುಪಡಿಸಿ ಬೇರೆಯವರ ಮಾತುಗಳು ಕೇವಲ ರಾಜಕೀಯ ಪ್ರೇರಿತವಾದದ್ದು ಎಂದು ಅವರು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷವನ್ನು ಬಿಟ್ಟಿಲ್ಲ. ಅವರು ಯಾವುದೇ ರೀತಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅವರು ಎಲ್ಲಿಗೂ ಹೋಗುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿಯು ನೋಟಿಸ್ ನೀಡಿ, ವಿವರಣೆ ಪಡೆಯಲಿದೆ ಎಂದು ಹರಿಪ್ರಸಾದ್ ತಿಳಿಸಿದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕುಂದಗೋಳ ಕ್ಷೇತ್ರದ ಮತದಾರರು ಮುಗ್ಧರು. ಉಪಕಾರ ಸ್ಮರಿಸಿಕೊಳ್ಳುವ ಗುಣದವರು. ಸಿ.ಎಸ್.ಶಿವಳ್ಳಿ ತಮ್ಮ ಜೀವಿತಾವಧಿಯಲ್ಲಿ ಮಾಡಿರುವ ಒಳ್ಳೆಯ ಕೆಲಸಗಳನ್ನು ಸ್ಮರಿಸಿಕೊಂಡು, ಇಲ್ಲಿನ ಜನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕುಸುಮಾ ಶಿವಳ್ಳಿಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಬಲರನ್ನು ಗುರಿಯನ್ನಾಗಿಸಿಕೊಂಡು ದಾಳಿ ಮಾಡುವುದು ಸಹಜ. ಡಿ.ಕೆ.ಶಿವಕುಮಾರ್ ಬಗ್ಗೆ ಬಿಜೆಪಿಯವರಲ್ಲಿ ಆತಂಕವಿದೆ. ಆದುದರಿಂದಲೇ, ಅವರ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News