ಪಾಂಡವಪುರ: ವಿಶಿಷ್ಠ ರೀತಿಯಲ್ಲಿ ವಿಶ್ವ ತಾಯಂದಿರ ದಿನಾಚರಣೆ; ಹಿರಿಯರಿಗೆ ಸನ್ಮಾನ

Update: 2019-05-14 17:04 GMT

ಪಾಂಡವಪುರ, ಮೇ 14: ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ದಿ.ಬೆಟ್ಟಮ್ಮ ಹಾಗೂ ಗಿರಿಗೌಡರ ಕುಟುಂಬಸ್ಥರು 'ಸಾರ್ಥಕ ಬದುಕು' ಕಾರ್ಯಕ್ರಮದ ಮೂಲಕ ವಿಶ್ವ ತಾಯಂದಿರ ದಿನವನ್ನು ಬಹಳ ವಿಶಿಷ್ಠವಾಗಿ ಆಚರಿಸಿದರು.

ಐದು ತಲೆಮಾರಿನ ಸದಸ್ಯರಾದ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಮ್ಮ-ಚಿಕ್ಕಪ್ಪ, ಮಕ್ಕಳು-ಮೊಮ್ಮಕ್ಕಳ, ಮರಿ ಮಕ್ಕಳು ಸೇರಿ ಸುಮಾರು 150ಕ್ಕೂ ಹೆಚ್ಚು ಒಂದೇ ಕುಟುಂಬದ ಸದಸ್ಯರು ಒಟ್ಟಿಗೆ ಸಾರ್ಥಕ ಬದುಕು ನಡೆಸುತ್ತಿದ್ದಾರೆ. ಅದರಲ್ಲಿ ಕೆಲವರು ಮಾತ್ರ ಉನ್ನತ ವಿದ್ಯಾಭ್ಯಾಸ, ಉದ್ಯೋಗ, ವ್ಯವಹಾರಕ್ಕಾಗಿ ಬೇರೆ ಬೇರೆ ಸ್ಥಳಗಳಲ್ಲಿ ಇದ್ದಾರೆ. ಆದರೆ, ಅವರೆಲ್ಲರೂ ರಜಾದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಶುಭ-ಸಂದರ್ಭಗಳಲ್ಲಿ ಒಟ್ಟಾಗಿ ಮನೆಯಲ್ಲಿ ಇರುತ್ತಾರೆ.

ವಿಶ್ವ ತಾಯಂದಿರ ದಿನವಾದ ರವಿವಾರದಂದು ಕುಟುಂಬದ ಸದಸ್ಯರೆಲ್ಲರೂ ಒಗ್ಗೂಡಿ 'ಸಾರ್ಥಕ ಬದುಕು' ಕಾರ್ಯಕ್ರಮದ ಮೂಲಕ ಬನ್ನಿ ಹಿರಿಯರನ್ನು ಗೌರವಿಸೋಣ ಎಂಬ ಸಂದೇಶ ನೀಡುವ ಮೂಲಕ ವಿನೂತನ ಹಾಗೂ ವಿಶೇಷ ಕಾರ್ಯಕ್ರಮ ಆಚರಿಸಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಮಹಿಳೆಯರು ತಾವು ಕಿರಿಯರು, ಹಿರಿಯರೆನ್ನದೇ ವೇದಿಕೆಯೇರಿ ವಿವಿಧ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಕುಣಿದು ಕುಪ್ಪಳಿಸಿದರು.

ದಿ.ಬೆಟ್ಟಮ್ಮ-ಗಿರಿಗೌಡರ ಜನ್ಮದಿನವನ್ನು ತಮ್ಮ ಗ್ರಾಮದ ಹಬ್ಬದಂತೆ ಆಚರಿಸಿ ಸಂಭ್ರಮಿಸಿದರು. ಗಿರಿಗೌಡರ ಇಬ್ಬರು ಸೊಸೆಯಂದಿರಾದ ಜವರಮ್ಮ (96), ಪುಟ್ಟಮ್ಮ (93) ಅವರನ್ನು ಅತ್ಯಂತ ಗೌರವದಿಂದ ಕುಟುಂಬ ಸದಸ್ಯರು ಅಭಿನಂದಿಸಿದರು. ಜತೆಗೆ ಮಳವಳ್ಳಿ ತಾಲೂಕಿನಲ್ಲಿ ಗಿಡ-ಮರಗಳನ್ನು ಬೆಳೆಸಿ, ಕೆರೆ-ಕಟ್ಟೆ ಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿರುವ 'ಆಧುನಿಕ ಭಗಿರಥ' ಎಂದೇ ಕರೆಯಲ್ಪಡುವ ಕಲ್ಮನೆ ಕಾಮೇಗೌಡರನ್ನೂ ಸನ್ಮಾನಿಸಿ ಅಭಿನಂದಿಸಲಾಯಿತು.

ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿದ ಕುಟುಂಬ ಸದಸ್ಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಸಾರ್ಥಕ ಬದುಕು ನಡೆಸಿದ ಕೆಲವು ಹಿರಿಯನ್ನು ಗೌರವಿಸಿ, ಸಾಧನೆ ಮಾಡಿದ ಕಿರಿಯರಿಗೆ ಗೌರವ ಸಲ್ಲಿಸಿದರು. ನಂತರ, ನೃತ್ಯ, ನಾಟಕ ಪ್ರದರ್ಶನ ನಡೆಯಿತು.

ಬಳಿಕ ದಿ.ಬೆಟ್ಟಮ್ಮ-ಗಿರಿಗೌಡರ ಸಾರ್ಥಕ ಬದುಕು ನಡೆಸಿದ ಅವಿಭಕ್ತ ಕುಟುಂಬದ ಸದಸ್ಯರ ಮಾಹಿತಿಯುಳ್ಳ 30 ನಿಮಿಷದ ಕಿರುಚಿತ್ರವೊಂದನ್ನು ಎಲ್‍ಇಡಿ ಪರದೆ ಮೂಲಕ ಪ್ರದರ್ಶಿಸಲಾಯಿತು. ಅಲ್ಲದೇ ಸುತ್ತಮುತ್ತಲ ಗ್ರಾಮದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಪರಿಸರ ಪ್ರೇಮಿ ಮಳವಳ್ಳಿ ತಾಲೂಕಿನ ಕಲ್ಮನೆ ಕಾಮೇಗೌಡ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News