ಮಹದೇಶ್ವರನ ಮುಂದೆ ಪ್ರಮಾಣ ಮಾಡಲಿ: ನರೇಂದ್ರಸ್ವಾಮಿಗೆ ಡಾ.ಕೆ.ಅನ್ನದಾನಿ ಸವಾಲು
ಮಂಡ್ಯ, ಮೇ 14: ಮಂಡ್ಯದಲ್ಲಿ ಜೆಡಿಎಸ್‍ನ ಹಾಲಿ ಶಾಸಕರು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕರ ವಾಕ್ಸಮರ ಮುಂದುವರಿದಿದ್ದು, ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ದೇವರ ಮುಂದೆ ಆಣೆ, ಪ್ರಮಾಣದ ಸವಾಲು ಶುರುವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಕೆಲಸ ಮಾಡಿಲ್ಲವೆಂದು ಮಲೆ ಮಹದೇಶ್ವರನ ಮೇಲೆ ಪ್ರಮಾಣ ಮಾಡಲಿ ಎಂದು ಅನ್ನದಾನಿ, ಕಾಂಗ್ರೆಸ್ ಮುಖಂಡ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.
ಇಷ್ಟವಿರಲಿಲ್ಲ ಅಂತ ಹೇಳಲಿ ಒಪ್ಪಿಕೊಳ್ಳೋಣ. ಆದರೆ, ಸುಮಲತಾ ಪರ ಕೆಲಸ ಮಾಡಲಿಲ್ಲ, ತಟಸ್ಥನಾಗಿದ್ದೆ ಎಂಬುದು ಸುಳ್ಳು. ನಮ್ಮ ಜತೆ ಬರುವುದು ಬೇಡ. ಮೊದಲೇ ನೀವೇ ಹೋಗಿ ಮಹದೇಶ್ವರನ ಮೇಲೆ ಆಣೆಮಾಡಿ ಬನ್ನಿ. ನಂತರ ನಾನೂ ಹೋಗಿ ಪ್ರಮಾಣ ಮಾಡುತ್ತೇನೆಂದು ಅನ್ನದಾನಿ ನರೇಂದ್ರಸ್ವಾಮಿ ಅವರಿಗೆ ತಾಕೀತು ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ತಾನು ಧ್ವನಿಯಾಗಿರುವುದಾಗಿ ನರೇಂದ್ರಸ್ವಾಮಿ ಹೇಳುತ್ತಾರೆ. ಆದರೆ, ಯಾರೂ ಪಕ್ಷಕ್ಕೆ ಧ್ವನಿಯಾಗಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಅವರಿಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬೇರೆಯವರು ಯಾರೂ ಧ್ವನಿಯಾಗಲ್ವಾ? ನಾನು ಜೆಡಿಎಸ್ ಪಕ್ಷದಲ್ಲಿ ಇಲ್ಲವೆಂದರೆ ಬೇರೆಯವರು ಯಾರೂ ಧ್ವನಿಯಾಗಿಲ್ವಾ ಎಂದು ಅವರು ಕುಟುಕಿದ್ದಾರೆ.