ಮೇ ತಿಂಗಳ ಅಂತ್ಯದೊಳಗೆ ಕಬ್ಬು ಬಾಕಿ ಪಾವತಿಗೆ ಮಂಡ್ಯ ಡಿಸಿ ಜಾಫರ್ ಕಟ್ಟುನಿಟ್ಟಿನ ಸೂಚನೆ

Update: 2019-05-14 17:20 GMT

ಮಂಡ್ಯ, ಮೇ 14: ಮೇ ತಿಂಗಳ ಅಂತ್ಯದೊಳಗೆ ರೈತರಿಗೆ ಕಬ್ಬು ಬಾಕಿ ಹಣವನ್ನು ಪಾವತಿಸಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎರಡು ತಿಂಗಳು ಕಳೆದರೂ ಹಣ ಪಾವತಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆ.ಆರ್.ಪೇಟೆ ಕೋರಮಂಡಲ್ ಶುಗರ್ಸ್‍ನವರು ಈ ತಿಂಗಳ 18ರೊಳಗೆ ಹಾಗೂ ಕೊಪ್ಪ ಎನ್‍ಎಸ್‍ಎಲ್ ಕಾರ್ಖಾನೆಯವರು ತಿಂಗಳ ಅಂತ್ಯದೊಳಗೆ, ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸಕ್ಕರೆ ದಾಸ್ತಾನು ಕಡಿಮೆ ಇರುವುದರಿಂದ ಕೂಡಲೆ ಬ್ಯಾಂಕ್‍ಗಳಿಂದ ಸಾಲ, ಇನ್ನಿತರೆ ಮೂಲಗಳಿಂದ ಸಾಲ ಪಡೆದು ಎಲ್ಲಾ ರೈತರ ಕಬ್ಬು ಬಾಕಿ ಹಣವನ್ನು ಯಾವುದೇ ಕಾರಣ ನೀಡದೆ ಜೂನ್ 15ರೊಳಗೆ ಸಂಪೂರ್ಣವಾಗಿ ಪಾವತಿಸಲು ಸೂಚಿಸಿದರು.

ಅಲ್ಲದೆ ಮುಂದಿನ ವರ್ಷದಿಂದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಪಾವತಿಯನ್ನು ಎಸ್ಕ್ರೂವ್ ಅಕೌಂಟ್‍ನಲ್ಲಿ ನಿರ್ವಹಿಸಲು ಸೂಚಿಸಿದ ಅವರು, ಎಲ್ಲಾ ಸಕ್ಕರೆ ಕಾರ್ಖಾನೆಗಳು ರೈತರ ಸಂಕಷ್ಟಕ್ಕೆ ಕೂಡಲೆ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಉಪವಿಭಾಗಧಿಕಾರಿ ರಾಜೇಶ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕಿ ಕುಮುದಾ ಹಾಗೂ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಐಸಿಎಲ್ ಶುಗರ್ಸ್, ಎನ್‍ಎಸ್‍ಎಲ್ ಹಾಗೂ ಮೈಷುಗರ್ ಕಾರ್ಖಾನೆಯ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News