ಮೂಡಿಗೆರೆ: ಕಾಫಿ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು; ಗ್ರಾಮಸ್ಥರಲ್ಲಿ ಭೀತಿ

Update: 2019-05-14 17:29 GMT

ಚಿಕ್ಕಮಗಳೂರು, ಮೇ 14: ಕಾಡಾನೆಗಳ ಗುಂಪೊಂದು ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿ ಗ್ರಾಮದ ಕಾಫಿ ತೋಟಕ್ಕೆ ದಾಳಿ ಇಟ್ಟು ಕಾಫಿ ಗಿಡಗಳನ್ನು ನಾಶ ಮಾಡಿರುವ ಘಟನೆಯಿಂದಾಗಿ ಅಕ್ಕಪಕ್ಕದ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಕಾಡಾನೆಗಳನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಆರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಮೂಡಿಗೆರೆ ತಾಲೂಕಿನ ಸತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಗುಂಪು ಕಾಫಿ ತೋಟದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಕಾಡಾನೆಗಳು ತೋಟದಲ್ಲಿದ್ದ ನೂರಾರು ಕಾಫಿ ಗಿಡಿಗಳನ್ನು ತುಳಿದು ನಾಶ ಮಾಡಿವೆ ಎಂದು ತಿಳಿದು ಬಂದಿದೆ. ಕಾಡಾನೆಗಳನ್ನು ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಸಿಬ್ಬಂದಿ ಸಹಾಯದಿಂದ ಆನೆಗಳನ್ನು ಕಾಡಿನತ್ತ ಓಡಸುವ ಸಾಹಸ ಮಾಡಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ಓಡಾಟ ಸಾಮಾನ್ಯವಾಗಿದ್ದು, ರಾತ್ರಿ ವೇಳೆ ಆನೆಗಳ ದಾಳಿಯಿಂದಾಗಿ ಪ್ರಾಣಾಪಾಯ ಸಂಭವಿಸುವ ಭೀತಿಯಿಂದಾಗಿ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಕಾಡಾನೆಗಳು ಹಗಲಿನ ವೇಳೆಯಲ್ಲಿಯೇ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದು, ಹೀಗೆ ಓಡಾಡುವ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಕಾಡಾನೆಗಳ ದಾಳಿಯಿಂದಾಗಿ ಚಿಕ್ಕಮಗಳೂರು ತಾಲೂಕಿನಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆಯಿಂದಾಗಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದ್ದು, ಮತ್ತೊಂದು ಅವಘಡ ಸಂಭವಿಸುವ ಮುನ್ನ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News