'ಮಡಿಕೇರಿ ಸ್ಕ್ವೇರ್' ಹೆಸರಿನಲ್ಲಿ ಅಭಿವೃದ್ಧಿಯಾಗಲಿದೆ ಮಳೆಹಾನಿ ಪ್ರದೇಶ

Update: 2019-05-14 17:47 GMT

ಮಡಿಕೇರಿ ಮೇ 14 : ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಹಾನಿಗೀಡಾದ ಮಡಿಕೇರಿ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣ ವ್ಯಾಪ್ತಿಯನ್ನು 'ಮಡಿಕೇರಿ ಸ್ಕ್ವೇರ್' ಹೆಸರಿನಲ್ಲಿ ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಮಹತ್ವಾಕಾಂಕ್ಷೆಯ ಯೋಜನೆಗೆ ಸ್ವತ: ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಒಪ್ಪಿಗೆ ಸೂಚಿಸಿದ್ದು, ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳು ಮಂಗಳವಾರ ಉದ್ದೇಶಿತ ಯೋಜನೆಯ ಸ್ಥಳ ಪರಿಶೀಲನೆ ನಡೆಸಿದರು. ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಲು ಈ ಸ್ಥಳ ಎಷ್ಟು ಸುರಕ್ಷಿತ ಮತ್ತು ಅಂದಾಜು ವೆಚ್ಚದ ಬಗ್ಗೆ ಚರ್ಚಿಸಿದರು. ಈಗಾಗಲೇ ಮಣ್ಣು ಪರೀಕ್ಷೆ ನಡೆಸಲಾಗಿದ್ದು, ಯೋಜನೆಯ ರೂಪುರೇಷೆಗಳನ್ನು ಇನ್ನಷ್ಟೇ ಸಿದ್ಧಪಡಿಸಬೇಕಿದೆ.

ಮಡಿಕೇರಿ ನಗರವನ್ನು ಪ್ರವಾಸಿಗರು ಪ್ರವೇಶಿಸುವಾಗ ಭವ್ಯ ರೀತಿಯಲ್ಲಿ ವರ್ಣರಂಜಿತ ವಾತಾವರಣ ಸೃಷ್ಟಿಯಾಗಬೇಕೆನ್ನುವ ನಾಗರಿಕರ ಒತ್ತಾಸೆಯ ಹಿನ್ನೆಲೆಯಲ್ಲಿ ನಗರಸಭೆ ಕೂಡ 'ಮಡಿಕೇರಿ ಸ್ಕ್ವೇರ್' ಬಗ್ಗೆ ಆಸಕ್ತಿ ತೋರಿದೆ. ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅವರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೇ ಈ ಯೋಜನೆಯ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವರ ಸೂಚನೆ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಈ ವರದಿಯಾಧಾರದಲ್ಲಿ ಸಚಿವರು ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ಆಕರ್ಷಕ ಪ್ರವಾಸಿತಾಣವಾಗಿ ನಿರ್ಮಾಣಗೊಳ್ಳಲಿರುವ 'ಮಡಿಕೇರಿ ಸ್ಕ್ವೇರ್' ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸಿದೆ. ಅಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭ ನಗರಸಭಾ ಪೌರಾಯುಕ್ತ ರಮೇಶ್, ಕೊಡಗು ಜಿಲ್ಲಾ ಹೊಟೇಲ್, ರೆಸ್ಟೋರೆಂಟ್ ಮತ್ತು ರೆಸಾರ್ಟ್ ಮಾಲಕರ ಅಸೋಸಿಯೇಷನ್‍ನ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News