ಮಡಿಕೇರಿ: ಬೆಳೆಗಾರರು, ರೈತರಿಗೆ ಇನ್ನೂ ದೊರೆತಿಲ್ಲ ಮಳೆಹಾನಿ ಪರಿಹಾರ; ಆರೋಪ, ಪ್ರತಿಭಟನೆಯ ಎಚ್ಚರಿಕೆ

Update: 2019-05-14 17:52 GMT

ಮಡಿಕೇರಿ ಮೇ 14 : ಕಳೆದ ವರ್ಷ ಸುರಿದ ಮಹಾಮಳೆಯಿಂದಾಗಿ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಇದರಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಇದುವರೆಗೆ ಸಂತ್ರಸ್ತ ಬೆಳೆಗಾರರಿಗೆ ಸಮರ್ಪಕವಾಗಿ ಮಳೆಹಾನಿ ಪರಿಹಾರ ವಿತರಿಸಿಲ್ಲವೆಂದು ತೀವ್ರ  ಅಸಮಾಧಾನ ವ್ಯಕ್ತಪಡಿಸಿರುವ ರೈತಪರ ಹಾಗೂ ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳು ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಭೂಕುಸಿತ, ಪ್ರವಾಹದಿಂದ ಕಾಫಿ ತೋಟ. ಏಲಕ್ಕಿ ತೋಟ, ಭತ್ತದ ಗದ್ದೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಹಾಗೂ  ಬದಲಿ ಜಾಗ ನೀಡಬೇಕು. ಮನೆ ಕಳೆದುಕೊಂಡವರಿಗೆ ಮನೆಗಳನ್ನು ಕೂಡಲೆ ನಿರ್ಮಿಸಿಕೊಡಬೇಕು. ಏಲಕ್ಕಿ, ಕಾಫಿ ತೋಟಗಳಲ್ಲಿ ಬಿದ್ದಿರುವ ಮರಗಳನ್ನು ತೋಟದ ಮಾಲಕರು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. 

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕಳೆದ ವರ್ಷ ಸುರಿದ ಮಹಾಮಳೆಯಿಂದ ಸೋಮವಾರಪೇಟೆ ತಾಲೂಕಿನಲ್ಲಿ ಕಾಫಿ, ಏಲಕ್ಕಿ, ಕರಿಮೆಣಸು, ಕಿತ್ತಳೆ, ಭತ್ತ ಮುಂತಾದ ಬೆಳೆ ಶೇಕಡ 70ರಿಂದ 80ರಷ್ಟು ಹಾನಿಯಾಗಿದೆ. ಆದರೆ ಇದುವರೆಗೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಬೆರಳಣಿಕೆ ಮಂದಿಗೆ ಒಂದೆರಡು ಸಾವಿರ ಪರಿಹಾರ ನೀಡಲಾಗಿದೆ. ಇಂತಹ ಅವೈಜ್ಞಾನಿಕ ಪರಿಹಾರದಿಂದ ರೈತಾಪಿ ವರ್ಗಕ್ಕೆ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಕೂಡಲೇ ಸಂತ್ರಸ್ತ ಬೆಳೆಗಾರರಿಗೆ ಸಮರ್ಪಕವಾದ ಪರಿಹಾರವನ್ನು ವಿತರಿಸಬೇಕು. ತಪ್ಪಿದಲ್ಲಿ ಮೇ 23 ರ ಬಳಿಕ ಬೆಳೆಗಾರರನ್ನು ಒಗ್ಗೂಡಿಸಿ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. 

ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬೋಪಣ್ಣ, ಉಪಾಧ್ಯಕ್ಷ ಕೆ.ಪಿ.ಬಸಪ್ಪ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಮುದ್ದಪ್ಪ, ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ.ಲವ, ಪದಾಧಿಕಾರಿಗಳಾದ ಸೋಮಶೇಖರ್, ಲಕ್ಷ್ಮಣ್, ರಾಮಚಂದ್ರ, ದಿನೇಶ್, ಕುಶಾಲಪ್ಪ, ಸುರೇಶ್ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News