ಹೆಚ್ಚುತ್ತಿರುವ ಕೋಮು ಹಿಂಸಾಚಾರ: ವಿಶ್ವಸಂಸ್ಥೆ ಸಲಹೆಗಾರರ ಕಳವಳ

Update: 2019-05-14 18:45 GMT

ವಿಶ್ವಸಂಸ್ಥೆ, ಮೇ 14: ಈಸ್ಟರ್ ರವಿವಾರದಂದು ನಡೆದ ಆತ್ಮಹತ್ಯಾ ಬಾಂಬ್ ದಾಳಿಗಳ ಬಳಿಕ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರಗಳ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಹಾಗೂ ಪೂರ್ವಾಗ್ರಹಪೀಡಿತ ದ್ವೇಷ ಸಂದೇಶಗಳ ಹರಡುವಿಕೆಯನ್ನು ಸಹಿಸದಂತೆ ಸರಕಾರ ಮತ್ತು ಧಾರ್ಮಿಕ ಗುಂಪುಗಳನ್ನು ಒತ್ತಾಯಿಸಿದೆ.

ಶ್ರೀಲಂಕಾ ಪ್ರಜೆಯಾಗಿರುವುದೆಂದರೆ ಓರ್ವ ಬೌದ್ಧ, ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತನಾಗಿರುವುದಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಶ್ರೀಲಂಕಾದ ನಾರ್ತ್‌ವೆಸ್ಟರ್ನ್ ರಾಜ್ಯದಲ್ಲಿ ಮನೆಗಳು, ಪೂಜಾ ಸ್ಥಳಗಳು ಮತ್ತು ಅಂಗಡಿಗಳ ಮೇಲಿನ ದಾಳಿಗಳು ಸೇರಿದಂತೆ ಧರ್ಮದ ಆಧಾರದಲ್ಲಿ ನಡೆಯುವ ಹಿಂಸಾಚಾರ ಕೃತ್ಯಗಳು ಹೆಚ್ಚುತ್ತಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ ಎಂಬುದಾಗಿ ಜಂಟಿ ಹೇಳಿಕೆಯೊಂದರಲ್ಲಿ ವಿಶ್ವಸಂಸ್ಥೆಯ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.

ಜನಾಂಗೀಯ ಹತ್ಯೆ ತಡೆ ಕುರಿತ ವಿಶ್ವಸಂಸ್ಥೆಯ ವಿಶೇಷ ಸಲಹೆಗಾರ ಆ್ಯಡಮ್ ಡೀಂಗ್ ಮತ್ತು ರಕ್ಷಿಸುವ ಜವಾಬ್ದಾರಿ ಕುರಿತ ವಿಶ್ವಸಂಸ್ಥೆಯ ವಿಶೇಷ ಸಲಹೆಗಾರ್ತಿ ಕ್ಯಾರನ್ ಸ್ಮಿತ್ ಈ ಜಂಟಿ ಹೇಳಿಕೆಯನ್ನು ಹೊರಡಿಸಿದ್ದಾರೆ.

ಎಪ್ರಿಲ್ 21ರಂದು ಶ್ರೀಲಂಕಾದ ವಿಲಾಸಿ ಹೊಟೇಲ್‌ಗಳು ಮತ್ತು ಚರ್ಚ್‌ಗಳ ಮೇಲೆ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ಸರಣಿ ದಾಳಿಗಳ ಬಳಿಕ ದೇಶದಲ್ಲಿ ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧದ ದಾಳಿಗಳಲ್ಲಿ ಹೆಚ್ಚಳವಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದಕ ದಾಳಿಯಲ್ಲಿ 258 ಮಂದಿ ಮೃತಪಟ್ಟಿದ್ದಾರೆ ಹಾಗೂ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

‘‘ಶ್ರೀಲಂಕಾವು ಬಹುತ್ವ ಸಮಾಜವನ್ನು ಹೊಂದಿದೆ. ಓರ್ವ ಶ್ರೀಲಂಕಾ ಪ್ರಜೆಯಾಗಿರುವುದೆಂದರೆ ಓರ್ವ ಬೌದ್ಧನಾಗಿರುವುದು, ಓರ್ವ ಹಿಂದೂವಾಗಿರುವುದು, ಓರ್ವ ಮುಸ್ಲಿಮ್ ಆಗಿರುವುದು, ಓರ್ವ ಕ್ರೈಸ್ತನಾಗಿರುವುದು. ಈ ಎಲ್ಲ ಸಮುದಾಯಗಳು ದೇಶದ ಸಂವಿಧಾನ ಮಾನ್ಯ ಮಾಡಿರುವಂತೆ, ತಮ್ಮ ಅಸ್ತಿತ್ವವನ್ನು ಹೊಂದುವ, ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಾಗೂ ಶಾಂತಿ ಮತ್ತು ಸುರಕ್ಷತೆಯಿಂದ ಬದುಕುವ ಹಕ್ಕುಗಳನ್ನು ಹೊಂದಿವೆ’’ ಎಂದು ವಿಶ್ವಸಂಸ್ಥೆಯ ಸಲಹೆಗಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News