ಲೂಟಿ ಮಾಡಲು ಬಿಎಸ್‌ವೈ ಮುಖ್ಯಮಂತ್ರಿ ಆಗಬೇಕಾ?: ಸಿದ್ದರಾಮಯ್ಯ

Update: 2019-05-15 12:41 GMT

ಹುಬ್ಬಳ್ಳಿ, ಮೇ 15: ರಾಜ್ಯವನ್ನು ಮತ್ತೆ ಲೂಟಿ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಾ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬುಧವಾರ ಕುಂದಗೋಳ ಕ್ಷೇತ್ರದ ಅಂಚಟಗೇರಿ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪಗೆ ವಯಸ್ಸಾಗಿದೆ. ಆದುದರಿಂದ, ಮಲಗಿದಾಗ ಅವರಿಗೆ ಮುಖ್ಯಮಂತ್ರಿಯ ಕುರ್ಚಿಯೇ ಕಾಣಿಸುತ್ತಿರುತ್ತದೆ. ಆದರೆ, ನಾವು ಯಾರೂ ಇಂತಹ ಕನಸನ್ನು ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದ ಸಮ್ಮಿಶ್ರ ಸರಕಾರ ಪತನವಾಗುತ್ತದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಬಿಜೆಪಿಯವರು ಬುರುಡೆ ಬಿಡುತ್ತಿದ್ದಾರೆ. ಯಡಿಯೂರಪ್ಪ ತಿಪ್ಪರಲಾಗ ಹಾಕಿದರೂ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸಮ್ಮಿಶ್ರ ಸರಕಾರವು ಸುಭದ್ರವಾಗಿದ್ದು, ಬಿಜೆಪಿಯವರು ಎಷ್ಟೇ ಪ್ರಯತ್ನಗಳನ್ನು ನಡೆಸಿದರೂ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಮೂರೇ ದಿನದಲ್ಲಿ ರಾಜೀನಾಮೆ ನೀಡಿದ ಯಡಿಯೂರಪ್ಪಗೆ ನಾಚಿಕೆಯಾಗುವುದಿಲ್ಲವೆ ಎಂದು ಅವರು ಟೀಕಿಸಿದರು.

ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು ಯಡಿಯೂರಪ್ಪ. ರೈತರ ಸಾಲಮನ್ನಾ ಮಾಡಿ ಅವರನ್ನು ಋಣಮುಕ್ತರನ್ನಾಗಿ ಮಾಡುತ್ತಿರುವುದು ಸಮ್ಮಿಶ್ರ ಸರಕಾರ. ಮನೆಯನ್ನು ಒಡೆದು ಹಾಕಿದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರು ಬದಲು, ಮನೆ ಕಟ್ಟಿದ ಸಿ.ಎಸ್.ಶಿವಳ್ಳಿ ಕುಟುಂಬದ ಪರವಾಗಿ ಜನ ಆಶೀರ್ವಾದ ಮಾಡುತ್ತಾರೆ ಎಂದು ಅವರು ಹೇಳಿದರು.

ಈ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ಕೇಂದ್ರದಲ್ಲಿ ನರೇಂದ್ರಮೋದಿ ಪ್ರಧಾನಿ ಆಗುವುದಿಲ್ಲ. ನಮ್ಮ ಯುಪಿಎ ಸರಕಾರ ಅಧಿಕಾರಕ್ಕೆ ಬರುತ್ತದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಆಗುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನನ್ನ ಆಪ್ತ ಮಿತ್ರ ಸಿ.ಎಸ್.ಶಿವಳ್ಳಿಯನ್ನು ನೆನೆದು ಕಣ್ಣೀರು ಹಾಕಿದ್ದೇನೆ. ಅದಕ್ಕೆ ನಮ್ಮ ರಾಜಕೀಯ ವಿರೋಧಿಗಳು ಟೀಕೆಗಳನ್ನು ಮಾಡಿದರು. ಈ ಡಿ.ಕೆ.ಶಿವಕುಮಾರ್ ಕಣ್ಣೀರು ಹಾಕುವ ಮಗ ಅಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಜೀವನದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸಿದ್ದೇನೆ. ಎಂದಿಗೂ ಎದೆಗುಂದಲಿಲ್ಲ. ಬಿಜೆಪಿಯವರು ಏನು ಕೆಲಸ ಮಾಡಿದ್ದಾರೆ ಎಂದು ಜನರ ಬಳಿ ಬಂದು ಮತ ಕೇಳುತ್ತಿದ್ದಾರೆ. ಯಡಿಯೂರಪ್ಪಮತ್ತೆ ಬಿಜೆಪಿ ಸರಕಾರ ರಚನೆ ಮಾಡುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಮೈತ್ರಿ ಸರಕಾರವನ್ನು ಅಸ್ತಿರಗೊಳಿಸಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು.

ಜಾತಿ, ಧರ್ಮ ಮರೆತು ನಮ್ಮ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರವಾಗಿ ಜನ ಕೆಲಸ ಮಾಡಲಿದ್ದಾರೆ. ಬಿಜೆಪಿಯ ನೂರಾರು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕುಸುಮಾ ಶಿವಳ್ಳಿ ಪರವಾಗಿ ಮತಯಂತ್ರಕ್ಕೆ ಸೇರುವ ಒಂದು ಮತವು, ಯಡಿಯೂರಪ ಎದೆಯಲ್ಲಿ ನಡುಕ ಹುಟ್ಟಿಸಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News