ಶಿವಮೊಗ್ಗ: ತಳ್ಳುಗಾಡಿ ವ್ಯಾಪಾರಸ್ಥರು - ಪೊಲೀಸರ ನಡುವೆ ಮಾತಿನ ಚಕಮಕಿ

Update: 2019-05-15 12:53 GMT

ಶಿವಮೊಗ್ಗ, ಮೇ 15: ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದ ಸುತ್ತಮುತ್ತಲು ವ್ಯಾಪಾರ ನಡೆಸುವುದಕ್ಕೆ ಸಂಬಂಧಿಸಿದಂತೆ ಬುಧವಾರ ಬೀದಿಬದಿ ವ್ಯಾಪರಸ್ಥರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕೆಲ ಸಮಯ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದ ಘಟನೆ ಬುಧವಾರ ನಡೆಯಿತು. 

ಉದ್ರಿಕ್ತ ವ್ಯಾಪಾರಸ್ಥರು ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ದಿಢೀರ್ ರಸ್ತೆ ತಡೆ ನಡೆಸಿದರು. ತಳ್ಳುಗಾಡಿಗಳನ್ನು ಕೂಡ ರಸ್ತೆಯಲ್ಲಿಯೇ ನಿಲ್ಲಿಸಿದರು. ಇದರಿಂದ ಬಿ.ಹೆಚ್.ರಸ್ತೆ, ಎ.ಎ.ವೃತ್ತ, ಶಿವಪ್ಪನಾಯಕ ವೃತ್ತಗಳಲ್ಲಿ ಕೆಲ ಸಮಯ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಪೊಲೀಸರು ವ್ಯಾಪಾರಸ್ಥರನ್ನು ಸ್ಥಳದಿಂದ ಚದುರಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. 

ಕಾರಣವೇನು?: ಶಿವಪ್ಪನಾಯಕ ಸರ್ಕಲ್, ಗಾಂಧಿಬಜಾರ್ ರಸ್ತೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಬೀದಿಬದಿ ವ್ಯಾಪಾರಸ್ಥರು ವಹಿವಾಟು ನಡೆಸಿಕೊಂಡು ಬರುತ್ತಿದ್ದರು. ಜನ-ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಡಳಿತವು ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿತ್ತು. 

ಇದಕ್ಕೆ ಬೀದಿಬದಿ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ಕೂಡ ನಡೆಸಿದ್ದರು. ಆದಾಗ್ಯೂ ಪಾಲಿಕೆ ಆಡಳಿತ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಈ ನಡುವೆ ಕೆಲ ವ್ಯಾಪಾರಸ್ಥರು ರಮಝಾನ್ ಹಬ್ಬದ ಹಿನ್ನೆಲೆಯಲ್ಲಿ ಶಿವಪ್ಪನಾಯಕ ಸರ್ಕಲ್ ಸುತ್ತಮುತ್ತ ತಳ್ಳುಗಾಡಿಯಿಟ್ಟುಕೊಂಡು ಮತ್ತೆ ವ್ಯಾಪಾರ ನಡೆಸಲಾರಂಭಿಸಿದ್ದರು. 

ಬುಧವಾರ ಪೊಲೀಸರು ವ್ಯಾಪಾರ ನಡೆಸದಂತೆ ವ್ಯಾಪಾರಗಳಿಗೆ ಸೂಚಿಸಿ, ಬಲವಂತವಾಗಿ ತಳ್ಳುಗಾಡಿಗಳನ್ನು ತೆರವುಗೊಳಿಸಲು ಮುಂದಾದರು. ಈ ಸಂದರ್ಭದಲ್ಲಿ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 
'ನಾವೆಲ್ಲ ಬಡವರು, ಬೀದಿಬದಿ ವ್ಯಾಪಾರದ ಮೂಲಕ ಜೀವನ ಕಟ್ಟಿಕೊಂಡಿದ್ದೆವೆ. ಸೂಕ್ತ ಪುನರ್ವಸತಿ ಕಲ್ಪಿಸದ ಕಾರಣದಿಂದ ಬೀದಿಪಾಲಾಗುವಂತಾಗಿದೆ. ಈ ಹಿಂದಿನಂತೆ ಗಾಂಧಿಬಜಾರ್, ಕಸ್ತೂರ ಬಾ ರಸ್ತೆ ಹಾಗೂ ಶಿವಪ್ಪನಾಯಕ ವೃತ್ತದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು' ಎಂದು ಪಟ್ಟು ಹಿಡಿದರು. 

ಮತ್ತೊಂದೆಡೆ ಪೊಲೀಸರು ಸದರಿ ಸ್ಥಳಗಳಲ್ಲಿ ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಸಂಚಾರಕ್ಕೆ ಅಡಚಣೆಯಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ಈಗಾಗಲೇ ಈ ಸ್ಥಳಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕೆಲ ವ್ಯಾಪಾರಸ್ಥರು ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿ, ಪೊಲೀಸರೊಂದಿಗೆ ಮಾತಿನ ಚಕಮಕಿಯೂ ನಡೆಸಿದರು. ಇದೇ ವೇಳೆ ವ್ಯಾಪಾರಿಯೋರ್ವ ಆತ್ಮಹತ್ಯೆಗೆ ವಿಫಲ ಯತ್ನಕ್ಕೆ ಮುಂದಾದ ಘಟನೆಯೂ ನಡೆಯಿತು. ಅಂತಿಮವಾಗಿ ಪೊಲೀಸರು ವ್ಯಾಪಾರಸ್ಥರನ್ನು ತೆರವುಗೊಳಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಶಿವಪ್ಪನಾಯಕ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 

ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಆಗ್ರಹ
ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಕಸ್ತೂರ ಬಾ ರಸ್ತೆಯಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಂತೆ ವ್ಯಾಪಾರಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಪ್ರಸ್ತುತ ಲೋಕಸಭೆ ಚುನಾವಣೆ ಮಾದರಿ ನೀತಿ-ಸಂಹಿತೆ ಜಾರಿಯಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಚುನಾವಣಾ ನೀತಿ-ಸಂಹಿತೆ ಪೂರ್ಣಗೊಂಡ ನಂತರ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ಕೆಲ ವ್ಯಾಪಾರಸ್ಥರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News