ರಮೇಶ್ ಜಾರಕಿಹೊಳಿಯನ್ನು ಭೇಟಿಯಾದ ಮಹೇಶ್ ಕುಮಟಳ್ಳಿ; ಕುತೂಹಲಕ್ಕೆ ಕಾರಣವಾದ ಚರ್ಚೆ

Update: 2019-05-15 16:35 GMT

ಬೆಂಗಳೂರು, ಮೇ 15: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿರುವ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಿನ್ನೆಯಷ್ಟೇ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಹಾಗೂ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ನಾಗರಾಜು ಪ್ರತ್ಯೇಕವಾಗಿ ರಮೇಶ್ ಜಾರಕಿಹೊಳಿಯನ್ನು ನಗರದಲ್ಲಿರುವ ಸೆವೆನ್ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಗೋಕಾಕ್‌ನಲ್ಲಿ ಬೀಡುಬಿಟ್ಟಿದ್ದ ರಮೇಶ್ ಜಾರಕಿಹೊಳಿ, ಸಿದ್ದರಾಮಯ್ಯ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

ಆದರೆ, ಸಿ.ಪಿ.ಯೋಗೀಶ್ವರ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಏಕೆ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದ್ದು, ಆಪರೇಷನ್ ಕಮಲದ ಸಿದ್ಧತೆಯೇ ಎಂಬ ಅನುಮಾನವೂ ಮೂಡಿದೆ. ಕಳೆದ ವರ್ಷವು ಆಪರೇಷನ್ ಕಮಲದ ಪ್ರಯತ್ನಗಳು ನಡೆಯುತ್ತಿದ್ದಾಗ ಯೋಗೀಶ್ವರ್, ಕಾಂಗ್ರೆಸ್ ಪಕ್ಷದ ಕೆಲ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರಕಾರ ಪತನವಾಗಲಿದೆ. 20ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಅವರೆಲ್ಲ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಒಂದೆಡೆ ಆಡಳಿತ ಪಕ್ಷದ ನಾಯಕರು ಉಪ ಚುನಾವಣೆಯ ಕಡೆ ಗಮನ ಕೇಂದ್ರೀಕರಿಸಿರುವಾಗ, ವಿರೋಧ ಪಕ್ಷ ಬಿಜೆಪಿ ಸದ್ದಿಲ್ಲದೆ, ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಕೈ ಹಾಕಿದೆಯಾ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಕಾಂಗ್ರೆಸ್ ಪಕ್ಷದಲ್ಲೆ ಮುಂದುವರೆಯುತ್ತಾರೆ ಎಂಬ ಭರವಸೆ ಇದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗಷ್ಟೇ ಟ್ವಿಟ್ ಮಾಡಿದ್ದರು. ಆದರೆ, ರಮೇಶ್ ಜಾರಕಿಹೊಳಿ ಜೊತೆ ಬಿಜೆಪಿ ನಾಯಕರ ಚರ್ಚೆ, ಅತೃಪ್ತ ಶಾಸಕರ ಭೇಟಿ ಕುತೂಹಲ ಕೆರಳಿಸಿದೆ.

ಪಕ್ಷ ಬಿಡಲ್ಲ: ಕೃಷ್ಣಾ ನದಿಯಲ್ಲಿ ನೀರಿಲ್ಲ. ಅದರ ಫೈಲ್ ತೆಗೆದುಕೊಂಡು ಬಂದಿದ್ದೆ. ಮಾಜಿ ಸಚಿವ ಸಿ.ಪಿ.ಯೋಗೀಶ್ವರ್, ರಮೇಶ್ ಜಾರಕಿಹೊಳಿಯನ್ನು ಯಾಕೆ ಭೇಟಿ ಮಾಡಿದ್ದಾರೆ ಗೊತ್ತಿಲ್ಲ. ಎಲ್ಲರೂ ಒಬ್ಬರನ್ನು ಒಬ್ಬರು ಭೇಟಿಯಾಗುತ್ತಿರುತ್ತಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದರು.

ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಅವರನ್ನೆ ಕೇಳಿ. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ನಾವು ಪಕ್ಷ ಬಿಟ್ಟು ಹೋಗಲ್ಲ. ನಮ್ಮೆಲ್ಲರ ನಿರ್ಧಾರ ಒಂದೇ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News