ಆಹಾರ, ನೀರು ಇಲ್ಲದೆ ಆನೆಗಳ ಸರಣಿ ಸಾವು: ಉನ್ನತ ಮಟ್ಟದ ಸಮಿತಿ ರಚನೆಗೆ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-05-15 17:30 GMT

ಬೆಂಗಳೂರು, ಮೇ 15: ರಾಜ್ಯದ ಹಲವೆಡೆ ಇರುವ ಶಿಬಿರಗಳಲ್ಲಿ ಆನೆಗಳು ಆಹಾರ, ನೀರು ಮತ್ತು ಔಷಧವಿಲ್ಲದೆ ಸರಣಿ ಸಾವನ್ನಪ್ಪುತ್ತಿರುವ ಸತ್ಯಾಂಶ ಅರಿಯಲು ಉನ್ನತ ಮಟ್ಟದ ಸಮಿತಿ ರಚನೆ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಮೈಸೂರು, ಮಡಿಕೇರಿ ಸೇರಿ ಮಾಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠವು ಅರಣ್ಯ, ಇಲಾಖೆ, ಪಿಸಿಸಿಎಫ್, ಕೊಡಗು ಮತ್ತು ಮೈಸೂರು ಡಿಸಿಎಫ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರರೂ ಆಗಿರುವ ಅಮೃತೇಶ್ ವಾದ ಮಂಡಿಸಿ, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ವಿಶೇಷವಾಗಿ ಕೊಡಗಿನ ದುಬಾರೆ, ಶಿವಮೊಗ್ಗದ ಸಕ್ರೆಬೈಲು ಮತ್ತು ನಾಗರಹೊಳೆಯಲ್ಲಿರುವ ಶಿಬಿರಗಳಲ್ಲಿ ಆನೆಗಳು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತಿವೆ. ಅವುಗಳಿಗೆ ಸರಿಯಾಗಿ ಆಹಾರ, ಕುಡಿಯುವ ನೀರು ಮತ್ತು ಔಷಧ ಪೂರೈಕೆ ಮಾಡುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಮೈಸೂರಿನ ಅಂಬಾರಿಯನ್ನು ಹೊತ್ತಿದ್ದ ದ್ರೋಣ ಎ.27ರಂದು ಸಾವನ್ನಪ್ಪಿದೆ. ಸರಿಯಾದ ಆರೈಕೆ ಇಲ್ಲದ ಕಾರಣ ಅದು ಸಾವನ್ನಪ್ಪಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ರೀತಿ ಸರಣಿ ಆನೆಗಳು ಸಾವನ್ನಪ್ಪುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪರಿಶೀಲನೆ ಮತ್ತು ಅಧ್ಯಯನ ನಡೆಸಿ ಕಾರಣ ಕಂಡು ಹಿಡಿಯಲು ತಜ್ಞರನ್ನು ಒಳಗೊಂಡ ಉನ್ನತ ಸಮಿತಿ ರಚಿಸಬೇಕೆಂದು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News