ಯಾವುದೇ ನಾಗರಿಕತೆಯು ಇನ್ನೊಂದಕ್ಕಿಂತ ಶ್ರೇಷ್ಠವಲ್ಲ: ಜಿನ್‌ಪಿಂಗ್

Update: 2019-05-15 18:37 GMT

ಬೀಜಿಂಗ್, ಮೇ 15: ಸಾಂಸ್ಕೃತಿಕ ಶ್ರೇಷ್ಠತೆಯಲ್ಲಿ ನಂಬಿಕೆ ಹೊಂದಿರುವವರು ಮೂರ್ಖರು ಎಂದು ಹೇಳಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಚೀನಾವು ಜಗತ್ತಿಗೆ ಹೆಚ್ಚೆಚ್ಚು ತೆರೆಯುತ್ತಾ ಹೋಗುವುದು ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಮರವನ್ನು ನಿವಾರಿಸುವ ಉದ್ದೇಶದ ಮಾತುಕತೆಗಳು ಕಳೆದ ವಾರ ಮುರಿದುಬಿದ್ದ ಬಳಿಕ, ಜಿನ್‌ಪಿಂಗ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು.

ಅಮೆರಿಕವು ಕಳೆದ ಶುಕ್ರವಾರ ಚೀನಾದ 200 ಬಿಲಿಯ ಡಾಲರ್ (14.05 ಲಕ್ಷ ಕೋಟಿ ರೂಪಾಯಿ) ಸರಕು ಆಮದಿನ ಮೇಲೆ ಆಮದು ತೆರಿಗೆಯನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಅದಕ್ಕೆ ಪ್ರತಿಯಾಗಿ, ಚೀನಾವು ಅಮೆರಿಕದಿಂದ ಮಾಡಿಕೊಳ್ಳುವ 60 ಬಿಲಿಯ ಡಾಲರ್ (ಸುಮಾರು 4.21 ಲಕ್ಷ ಕೋಟಿ ರೂಪಾಯಿ) ಮೊತ್ತದ ಆಮದಿನ ಮೇಲೆ ಹೆಚ್ಚುವರಿ ತೆರಿಗೆಯನ್ನು ಜೂನ್ 1ರಿಂದ ವಿಧಿಸಲು ಮುಂದಾಗಿದೆ.

ಪ್ರಚಾರ ಸಚಿವಾಲಯವು ರಾಜಧಾನಿ ಬೀಜಿಂಗ್‌ನಲ್ಲಿ ಏರ್ಪಡಿಸಿದ ಸಭೆಯಲ್ಲಿ ಜಿನ್‌ಪಿಂಗ್ ಮಾತನಾಡುತ್ತಿದ್ದರು.

 ಚೀನಾದ ನಾಗರಿಕತೆಯು ‘ಮುಕ್ತ ವ್ಯವಸ್ಥೆ’ಯಾಗಿದೆ ಎಂದು ಹೇಳಿದ ಅವರು, ಅದು ನಿರಂತರವಾಗಿ ಬೌದ್ಧ ಧರ್ಮ, ಮಾರ್ಕ್ಸ್‌ವಾದ ಮತ್ತು ಇಸ್ಲಾಮ್ ಮುಂತಾದ ಇತರ ಸಂಸ್ಕೃತಿಗಳೊಂದಿಗೆ ವಿನಿಮಯಗಳನ್ನು ಮಾಡಿಕೊಂಡಿದೆ ಹಾಗೂ ಕಲಿತುಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News