ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆದಿಲ್ಲ: ಡಾ.ಜಿ.ಪರಮೇಶ್ವರ್

Update: 2019-05-16 13:00 GMT

ಕಲಬುರಗಿ, ಮೇ 16: ಮುಖ್ಯಮಂತ್ರಿಯ ಹುದ್ದೆಯ ಕುರಿತು ಕೆಲ ನಾಯಕರು ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿರಬಹುದು. ಆದರೆ, ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಚರ್ಚೆ ಪಕ್ಷದ ಆಂತರಿಕ ಮಟ್ಟದಲ್ಲಿ ನಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಇದ್ದಾರೆ. ಆದುದರಿಂದ, ಆ ಹುದ್ದೆಯ ಬಗ್ಗೆ ಚರ್ಚೆ ನಡೆಸುವುದು ಅಪ್ರಸ್ತುತವಾದದ್ದು. ನನ್ನನ್ನೂ ಸೇರಿಸಿದಂತೆ ರಾಜ್ಯದಲ್ಲಿ ಹಲವು ಮುಖಂಡರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿದ್ದಾರೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸಾಂದರ್ಭಿಕವಾಗಿ ಮಾತನಾಡಿರುವುದನ್ನು ಬೇರೆ ಅರ್ಥದಲ್ಲಿ ಕಲ್ಪಿಸಿಕೊಂಡು, ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ನಾಲ್ಕು ವರ್ಷಗಳ ಬಳಿಕ ನಡೆಯುವ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ತೀರ್ಮಾನಿಸಿದರೆ ಆಯ್ತು ಎಂದು ಪರಮೇಶ್ವರ್ ಹೇಳಿದರು.

ಉಮೇಶ್ ಜಾಧವ್ ಬಿಜೆಪಿಗೆ ಹೋಗಿದ್ದಾರೆ. ಈಗ ಅವರ ಮಗನನ್ನೇ ಉಪ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ. ಇಂತಿಷ್ಟು ಹಣ ಕೊಡಬೇಕು, ಲೋಕಸಭೆ, ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ ನೀಡಬೇಕೆಂಬ ಪ್ಯಾಕೇಜ್ ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ನಾವು ಹಿಂದಿನಿಂದಲೂ ಕ್ರಮ ಕೈಗೊಂಡಿದ್ದೇವೆ. ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಗೆ 50 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ. ಈ 50 ಕೋಟಿ ರೂ. ಎಲ್ಲಿಂದ ಬಂತು. ಉಮೇಶ್ ಜಾಧವ್ 50 ಕೋಟಿ ರೂ. ತೆಗೆದುಕೊಂಡು ಬಿಜೆಪಿ ಹೋಗಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ರಾಜ್ಯದ ಮೈತ್ರಿ ಸರಕಾರ ಪತನಗೊಳ್ಳುತ್ತದೆ ಎಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೇ 23 ಅಲ್ಲ, 24 ಅಲ್ಲ, ಸರಕಾರಕ್ಕೆ ಯಾವುದೇ ಡೆಡ್ ಲೈನ್ ಇಲ್ಲ. ಬಿಜೆಪಿಯವರು ನೂರು ಬಾರಿ ಜಪ ಮಾಡಿದರೂ ಮೈತ್ರಿ ಸರಕಾರ ಪತನಗೊಳ್ಳುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಟ್ವಿಟ್: ಸಚಿವ ಎಚ್.ಡಿ.ರೇವಣ್ಣ ಮತ್ತು ಮಾಜಿ ಸಿಎಂ ಸಿದ್ಧರಾಮಯ್ಯ ತುಂಬಾ ಆತ್ಮೀಯರು. ಆದುದರಿಂದ, ರೇವಣ್ಣಗೂ ಮುಖ್ಯಮಂತ್ರಿಯಾಗುವ ಅರ್ಹತೆಯಿದೆ ಎಂದು ಟ್ವಿಟ್ ಮಾಡಿರಬೇಕು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಪರಮೇಶ್ವರ್ ಹೇಳಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಮಹಾರಾಷ್ಟ್ರ ಸರಕಾರಕ್ಕೆ 4300 ಕೋಟಿ ರೂ.ಬಿಡುಗಡೆ ಮಾಡಿರುವ ಕೇಂದ್ರ ಸರಕಾರ, ನಮಗೆ ಪರಿಹಾರ ಬಿಡುಗಡೆ ಮಾಡುವುದರಲ್ಲಿ ಮಾತ್ರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಮೂರು ಸಾವಿರ ಕೋಟಿ ರೂ.ಬಿಡುಗಡೆ ಮಾಡಬೇಕಿತ್ತು. ಆದರೆ, ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೇ 1300 ಕೋಟಿ ರೂ.ಬಿಡುಗಡೆ ಮಾಡಿದೆ. ರಾಜ್ಯ ಇಷ್ಟೆಲ್ಲ ಸಂಕಷ್ಟ ಎದುರಿಸುತ್ತಿದ್ದರೂ ಕೇಂದ್ರ ಸ್ಪಂದಿಸುತ್ತಿಲ್ಲ ಪರಮೇಶ್ವರ್ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News