ಐಎಎಸ್ ಅಧಿಕಾರಿ ಮೊಹ್ಸಿನ್ ಅಮಾನತು ಆದೇಶ ತಡೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಚು.ಆಯೋಗ

Update: 2019-05-16 14:23 GMT
ಮುಹಮದ್ ಮೊಹ್ಸಿನ್,

ಬೆಂಗಳೂರು, ಮೇ 16: ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ ಮಾಡಿದ್ದ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಮುಹಮದ್ ಮೊಹ್ಸಿನ್ ಅಮಾನತು ಆದೇಶಕ್ಕೆ ಸಿಎಟಿ ತಡೆ ನೀಡಿರುವುದನ್ನು ಪ್ರಶ್ನಿಸಿ ಚುನಾವಣೆ ಆಯೋಗ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಮುಹಮದ್ ಮೊಹ್ಸಿನ್, ಕೇಂದ್ರ ಸರಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಭಾರತೀಯ ಚುನಾವಣೆ ಆಯೋಗ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಐಎಎಸ್ ಅಧಿಕಾರಿ ಮುಹಮದ್ ಮೊಹ್ಸಿನ್ ಅವರು ಒಡಿಶಾದ ಸಂಬಲ್ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ತಪಾಸಣೆ ಮಾಡಿ ವಿಶೇಷ ರಕ್ಷಣಾ ಗುಂಪು ಅಥವಾ ಎಸ್‌ಪಿಜಿ ಭದ್ರತೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ, ಮೊಹ್ಸಿನ್ ಅಮಾನತು ಆದೇಶಕ್ಕೆ ಸಿಎಟಿ ನೀಡಿರುವ ತಡೆ ಆದೇಶವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ವಕೀಲರ ಆದೇಶ ಆಲಿಸಿದ ನ್ಯಾಯಪೀಠವು ಮುಹಮದ್ ಮೊಹ್ಸಿನ್, ಕೇಂದ್ರ ಸರಕಾರ, ರಾಜ್ಯ ಸರಕಾರ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿತು. 

1996ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಮುಹಮದ್ ಮೊಹ್ಸಿನ್, ವಿಶೇಷ ರಕ್ಷಣಾ ಗುಂಪು ಅಥವಾ ಎಸ್‌ಪಿಜಿ ಸಿಬ್ಬಂದಿ ಬಗ್ಗೆ ನೀಡಿದ್ದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿಲ್ಲ ಎನ್ನುವ ಕಾರಣ ನೀಡಿ ಚುನಾವಣೆ ಆಯೋಗ ಅಮಾನತು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೊಹ್ಸಿನ್ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯ ಮೊರೆ ಹೋಗಿದ್ದರು. ಸಿಎಟಿ ಮೊಹ್ಸಿನ್ ಅಮಾನತು ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚುನಾವಣೆ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News