‘ಸಿದ್ದರಾಮಯ್ಯ ಟ್ವಿಟ್’ ವಿಶ್ವಾಸದ್ದೋ-ಕಾಲೆಳೆಯೋ ಪ್ರೀತಿಯೋ: ಅರವಿಂದ ಲಿಂಬಾವಳಿ ವ್ಯಂಗ್ಯ

Update: 2019-05-16 15:50 GMT

ಚಿಂಚೋಳಿ, ಮೇ 16: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುಣಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಬೇಕಿತ್ತು ಎನ್ನುವ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿರುವ ಟ್ವಿಟ್ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಇದು ವಿಶ್ವಾಸದ ಪ್ರೀತಿಯೋ ಅಥವಾ ಕಾಲೆಳೆಯೋ ಪ್ರಿತಿಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಗುರುವಾರ ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಪರ ಪ್ರಚಾರದಲ್ಲಿ ತೊಡಗಿರುವ ಅವರು, ಗ್ರಾಮಗಳಲ್ಲಿ ಬೋವಿ ಸಮುದಾಯದ ಮುಖಂಡರ ಆಂತರಿಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಒಟ್ಟಾರೆ ಈ ಟ್ವಿಟ್‌ಗಳ ಸಮರ ನೋಡಿದರೆ ಇದು ಚುನಾವಣೆ ಪ್ರಚಾರವೋ ಅಥವಾ ನಿಮ್ಮ ಕಿತ್ತಾಟವೋ ಗೊತ್ತಾಗುತ್ತಿಲ್ಲ. ಈ ರೀತಿ ಕಿತ್ತಾಟದಲ್ಲಿ ತೊಡಗಿಕೊಂಡಿದ್ದರೆ ಜನರು ಮತ ಹಾಕುತ್ತಾರೆ ಎಂಬುದು ನಿಮ್ಮ ನಂಬಿಕೆಯೆ ಎಂದು ಅವರು ತಿರುಗೇಟು ನೀಡಿದರು.

ಕನಿಷ್ಠ ಉಪಚುನಾವಣೆಯಲ್ಲಾದರೂ ಒಂದಾಗುತ್ತಾರೆ ಅಂದುಕೊಂಡಿದ್ವಿ. ಆದರೆ ಈ ಕಿತ್ತಾಟ ನೋಡಿದಲ್ಲಿ ಚುನಾವಣೆಯ ನಂತರ ಸರಕಾರ ಉಳಿಯುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಮತ್ತಷ್ಟು ಉಪಚುನಾವಣೆಗಳು ಬರಬಹುದಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಬೆಂಬಲಕ್ಕೆ ಹಲವು ನಾಯಕರು ರಾಜೀನಾಮೆ ನೀಡಬಹುದಾಗಿದೆ. ಉಪಚುನಾವಣೆಗಳು ಬರುವುದು ಖಚಿತ ಎಂದ ಅವರು, ರಮೇಶ್ ಜಾರಕಿಹೊಳಿ ಮಾತ್ರವಲ್ಲ ಬೇರೆಯವರೂ ಬರಬಹುದು. ಕಾಂಗ್ರೆಸ್ ಸಂಖ್ಯಾಬಲ ಕಡಿಮೆಯಾಗೋದು ಖಚಿತ ಎಂದು ಅರವಿಂದ ಲಿಂಬಾವಳಿ ತಿಳಿಸಿದರು. ಮೊದಲು ಕಾಂಗ್ರೆಸ್ ತನ್ನ ಶಾಸಕರನ್ನು ಸರಿಯಾಗಿ ಇಟ್ಟುಕೊಳ್ಳಲಿ. ನಂತರ ಆಪರೇಷನ್ ಹಸ್ತಮಾಡಲಿ. ಸಿ.ಪಿ.ಯೋಗೀಶ್ವರ್ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ವೈಯಕ್ತಿಕ. ಕೇಂದ್ರ ಬಿಜೆಪಿ ನಾಯಕರು ಸರಕಾರವನ್ನು ಅಭದ್ರಗೊಳಿಸುವ ಕಾರ್ಯಕ್ಕೆ ಕೈ ಹಾಕಬೇಡಿ ಎಂದು ಹೇಳಿದ್ದಾರೆ. ಆದರೆ ತಾನಾಗಿಯೇ ಸರಕಾರ ಬಿದ್ದರೆ ನಾವು ಸರಕಾರ ರಚನೆ ಮಾಡಲಿದ್ದೇವೆ ಎಂದು ಅವರು ಹೇಳಿದರು. ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಬಹುಮತದಿಂದ ಗೆಲ್ಲುವುದು ಸ್ಪಷ್ಟ. ವೃತ್ತಿಯಿಂದ ವೈದ್ಯರಾಗಿರುವ ಅವರು ಚಿಂಚೋಳಿ ಕ್ಷೇತ್ರದ ಆರೋಗ್ಯವನ್ನು ಸುಧಾರಿಸುತ್ತಾರೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News