ರಾಜ್ಯ ಉಪ ಚುನಾವಣೆ: ಬಹಿರಂಗ ಪ್ರಚಾರ ಮೇ 17ಕ್ಕೆ ಅಂತ್ಯ

Update: 2019-05-16 16:17 GMT

ಬೆಂಗಳೂರು, ಮೇ 16: ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭೆ ಉಪಚುನಾವಣೆಯ ಬಹಿರಂಗ ಪ್ರಚಾರ ನಾಳೆ(ಮೇ 17) ಅಂತ್ಯಗೊಳ್ಳಲಿದ್ದು, ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ತಿಳಿಸಿದ್ದಾರೆ.

ಗುರುವಾರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿಂಚೋಳಿ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 17, ಕುಂದಗೋಳದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಒಟ್ಟು 3,83,313 ಮತದಾರರ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

ಚಿಂಚೋಳಿಯಲ್ಲಿ ಕ್ಷೇತ್ರದಲ್ಲಿ 214 ಮತಗಟ್ಟೆಗಳಿದ್ದು, 25 ಸೂಕ್ಷ್ಮ ಮತಗಟ್ಟೆ, 189 ಸಾಮಾನ್ಯ ಮತಗಟ್ಟೆಗಳಾಗಿವೆ. ಹಾಗೂ ಕುಂದಗೋಳದಲ್ಲಿ 241ಮತಗಟ್ಟೆಗಳಿದ್ದು, 60 ಸೂಕ್ಷ್ಮ ಮತಗಟ್ಟೆ, 181ಸಾಮಾನ್ಯ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಈ ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಟ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ರ್ಯಾಂಪ್ ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಚಿಂಚೋಳಿ ಕ್ಷೇತ್ರದಲ್ಲಿ ಒಟ್ಟು 265 ಬೂತ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. 276 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, 26 ಮಂದಿಯನ್ನು ಸಂಚಾರ ವ್ಯವಸ್ಥೆಗೆ ನಿಯೋಜಿಸಲಾಗಿದೆ. ಹಾಗೆಯೆ ಕುಂದಗೋಳದಲ್ಲಿ 144 ಬೂತ್ ಅಧಿಕಾರಿ ಹಾಗೂ ಸಿಬ್ಬಂದಿ, 120 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ 121 ಮಂದಿಯನ್ನು ಸಂಚಾರ ವ್ಯವಸ್ಥೆಗೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಚುನಾವಣಾ ಆಯೋಗದ ಅಧಿಕೃತ ಮತದಾನ ಚೀಟಿ ಇಲ್ಲದವರು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯಸರಕಾರ, ಸರಕಾರಿ ಸಾರ್ವಜನಿಕ ಸಂಸ್ಥೆಗಳು ನೀಡಿರುವ ಫೋಟೊ ಗುರುತಿನ ಚೀಟಿ, ಬ್ಯಾಂಕ್ ಅಥವಾ ಅಂಚೆ ಇಲಾಖೆ ಫೋಟೊ ಸಹಿತ ವಿತರಿಸಿರುವ ಪಾಸ್ ಬುಕ್, ಪಾನ್ ಕಾರ್ಡ್, ಎನ್‌ಪಿಆರ್ ಮೂಲಕ ಆರ್‌ಜಿಐ ವಿತರಿಸಿರುವ ಪಾಸ್‌ಬುಕ್, ಪಾನ್‌ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ 11ಬಗೆಯ ಪರ್ಯಾಯ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದು

ಎಡಗೈ ಮಧ್ಯೆ ಬೆರಳಿಗೆ ಶಾಯಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಡಗೈನ ಉಂಗುರ ಬೆರಳಿಗೆ ಶಾಯಿ ಹಾಕಲಾಗಿತ್ತು. ಹೀಗಾಗಿ ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಲ್ಲಿ ಎಡಗೈ ಮಧ್ಯೆ ಬೆರಳಿಗೆ ಶಾಯಿ ಹಾಕುವಂತೆ ಸೂಚಿಸಲಾಗಿದೆ.

ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ವಿಳಂಬವಾಗುವ ಸಂಭವವಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರತಿ ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಟ 5ಮತ ಕೇಂದ್ರಗಳನ್ನು ಆಯ್ಕೆ ಮಾಡಿ, ಮತಯಂತ್ರದಲ್ಲಿರುವ ಮತಗಳನ್ನು ಎಣಿಸುವ ಜೊತೆಗೆ ವಿವಿ ಪ್ಯಾಟ್‌ನಲ್ಲಿರುವ ಮತಗಳನ್ನು ಎಣಿಸಿ ತಾಳೆ ನೋಡಬೇಕಿದೆ. ಹೀಗಾಗಿ ಹಿಂದಿನ ಮತ ಎಣಿಕೆಗಳಂತೆ ಈ ಬಾರಿ ಶೀಘ್ರ ಮತ ಎಣಿಕೆ ಆಗುವುದಿಲ್ಲ.

-ಸಂಜೀವ್‌ ಕುಮಾರ್, ಮುಖ್ಯ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News