ಶಿವಮೊಗ್ಗ: ಕೇಂದ್ರಿಯ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಸಾವು
ಶಿವಮೊಗ್ಗ, ಮೇ 16: ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿರುವ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಯೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಸಾಗರದ ನಿವಾಸಿ ಇರ್ಫಾನ್(28) ಮೃತಪಟ್ಟ ವಿಚಾರಣಾಧೀನ ಕೈದಿ ಎಂದು ಗುರುತಿಸಲಾಗಿದೆ. ಈತ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮುಂಜಾನೆ ಸರಿಸುಮಾರು 4 ರ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ. ತಕ್ಷಣವೇ ಸಿಬ್ಬಂದಿಗಳು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಪುನಃ 8 ಗಂಟೆಗೆ ಇರ್ಫಾನ್ ಅಸ್ವಸ್ಥಗೊಂಡಿದ್ದು, ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದ್ದು, ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ತಿಳಿದುಬರಬೇಕಾಗಿದೆ.
ಪ್ರಕರಣ ದಾಖಲು: ಈತನ ಮೇಲೆ ಸಾಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 13/18 ಯು/ಎಸ್ 363, 376(II) 4.6 ಫೋಸ್ಕೊ ಕಾಯ್ದೆ ಅಡಿ ದೂರು ದಾಖಲಾಗಿತ್ತು. ಜನವರಿ 28, 2018 ರಲ್ಲಿ ಈತ ಜೈಲು ಸೇರಿದ್ದು, ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯದಲ್ಲಿ ಯುಟಿಪಿ 143/18 ಪ್ರಕರಣದಲ್ಲಿ ಈತನ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.