ದಾವಣಗೆರೆ: ಗೃಹ ಪ್ರವೇಶದ ಊಟ ಸೇವಿಸಿದ್ದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Update: 2019-05-16 16:49 GMT

ದಾವಣಗೆರೆ, ಮೇ 16: ಗೃಹ ಪ್ರವೇಶದ ಊಟ ಸೇವಿಸಿದ್ದ ಸುಮಾರು 60 ಕ್ಕೂ ಹೆಚ್ಚು ಮಂದಿ ತೀವ್ರ ವಾಂತಿ, ಬೇಧಿಯಿಂದ ಅಸ್ಪಸ್ಥಗೊಂಡು ಆಸ್ಪತ್ರೆ ಸೇರಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾ. ಆರುಂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.

ನ್ಯಾಮತಿ ತಾ. ಆರುಂಡಿ ಗ್ರಾಮದ ಗಂಗಾಧರಪ್ಪ ಎಂಬುವರ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಊಟ ಮಾಡಿದ್ದ 60-70 ಮಂದಿ ವಾಂತಿ, ಬೇಧಿಯಿಂದ ತೀವ್ರ ಅಸ್ವಸ್ಥಗೊಂಡಿದ್ದು, ರಾತ್ರೋರಾತ್ರಿ ಆ ಎಲ್ಲರನ್ನೂ ನ್ಯಾಮತಿ ಸರ್ಕಾರಿ ಆಸ್ಪತ್ರೆ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಂಗಾಧರಪ್ಪ ಕುಟುಂಬ ಹೊಸದಾಗಿ ಕಟ್ಟಿದ್ದ ಮನೆಯ ಗೃಹ ಪ್ರವೇಶ ಸಮಾರಂಭಕ್ಕೆಂದು ಬಂಧು-ಬಳಗ, ಸ್ನೇಹಿತರು, ಗ್ರಾಮಸ್ಥರು ಬಂದು, ಆತಿಥ್ಯ ಸ್ವೀಕರಿಸಿದ್ದಾರೆ. ಹೀಗೆ ಊಟ ಮಾಡಿದವರ ಪೈಕಿ ಹಲವರಿಗೆ ವಾಂತಿ, ಬೇಧಿ ಕಾಣಿಸಿಕೊಂಡರೆ, ಮತ್ತೆ ಕೆಲವರು ನಿತ್ರಾಣರಾಗಿ ಅಲ್ಲಲ್ಲೇ ನೆಲಕ್ಕೊರಗಿ ಸಂಕಟದಿಂದ ಬಳಲಿದ್ದಾರೆ. ತಕ್ಷಣವೇ ಅಸ್ವಸ್ಥರನ್ನು ನ್ಯಾಮತಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಅಸ್ವಸ್ಥಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಷಾಹಾರ ಸೇವನೆಯಿಂದಾಗಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ 60ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೃಹ ಪ್ರವೇಶದ ಸಮಾರಂಭದ ಅಡುಗೆಯಲ್ಲಿ ಏನೋ ವ್ಯತ್ಯಾಸವಾಗಿದ್ದರಿಂದ ಹೀಗಾಗಿದೆ. ವಿಷಾಹಾರ ಸೇವನೆ ಪ್ರಕರಣದ ಹಿನ್ನೆಲೆ ಯಲ್ಲಿ ವೈದ್ಯಾಧಿಕಾರಿಗಳು ಆರುಂಡಿ ಗ್ರಾಮದ ಗಂಗಾಧರಪ್ಪ ನಿವಾಸಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News