ಪತಿಯ ಸ್ನೇಹಿತರಿಂದ ಅತ್ಯಾಚಾರ, ಕೊಲೆ ಬೆದರಿಕೆ: ಗೃಹಿಣಿ ಆರೋಪ

Update: 2019-05-16 17:39 GMT

ಮಂಡ್ಯ, ಮೇ 16: ತನ್ನ ಪತಿಯ ಸ್ನೇಹಿತರಿಬ್ಬರು ಬಲವಂತವಾಗಿ ತನ್ನ ಮೇಲೆ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗೃಹಿಣಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮೇ 13 ರಂದು ದೂರು ನೀಡಿದ್ದಾರೆ.

ತಾಲೂಕಿನ ಕೋಲಕಾರನದೊಡ್ಡಿ ಗ್ರಾಮದ ಮಹಿಳೆಯೊಬ್ಬರು ಅದೇ ಗ್ರಾಮದ ಕುಮಾರ ಮತ್ತು ರವಿ ಎಂಬುವರು ಈ ಕೃತ್ಯವೆಸಗಿದ್ದು, ಅವರನ್ನು ಬಂಧಿಸಿ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

ಒಂದು ವರ್ಷ ಮೂರು ತಿಂಗಳ ಹಿಂದೆ ತನ್ನ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ವಾಸವಿದ್ದೆ. ಮೂರು ತಿಂಗಳ ಹಿಂದೆ ತನ್ನ ಪತಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದಾಗ ರವಿ, ಕುಮಾರ ಅತ್ಯಾಚಾರವೆಸಗಿದ್ದಾರೆ ಎಂದು ಅವರು ಆಕೆ ದೂರಿದ್ದಾರೆ. ಘಟನೆ ಬಹಿರಂಗಪಡಿಸಿದರೆ ಪತಿ ಮತ್ತು ನನ್ನ ಇಬ್ಬರನ್ನೂ ಕೊಲೆ ಮಾಡುವುದಾಗಿ ಹೆದರಿಸಿದ್ದರು. ಹಾಗಾಗಿ ಸುಮ್ಮನಿದ್ದೆ. ಕಳೆದ ಎಪ್ರಿಲ್ 27 ರಂದು ಆರೋಪಿಗಳು ಬಲವಂತವಾಗಿ ಮತ್ತೆ ಅತ್ಯಾಚಾರ ಎಸಗಿದರು ಎಂದು ಅಕೆ ಆಪಾದಿಸಿದ್ದಾರೆ. 

ಈ ವಿಷಯ ತನ್ನ ಪತಿಗೆ ತಿಳಿದು ಮನನೊಂದು ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮೇ 4 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿ ಈ ಸಂಬಂಧ ಮೇ 9 ರಂದು ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದೇನೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಆದರೆ, ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ತಮಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಿ ಕಾನೂನು ಪ್ರಕಾರ ನ್ಯಾಯ ಕೊಡಿಸಬೇಕೆಂದು ಆಕೆ ಎಸ್ಪಿ ಅವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಆಕೆಯ ಸಂಬಂಧಿಗಳಾದ ಚನ್ನೇಗೌಡ ಹಾಗೂ ರಾಮಣ್ಣ ಎಂಬುವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News