ಬರ ಪ್ರದೇಶಗಳಿಗೆ ನೀರು ಪೂರೈಕೆಗೆ ಅಗತ್ಯ ಕ್ರಮ: ಚಿಕ್ಕಮಗಳೂರು ಡಿಸಿ

Update: 2019-05-16 17:41 GMT

ಚಿಕ್ಕಮಗಳೂರು, ಮೇ 15: ಕುಡಿಯುವ ನೀರು ಪೂರೈಕೆಗಾಗಿ ಎನ್‍ಡಿಆರ್‍ಎಫ್ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಜಿಲ್ಲೆಯಲ್ಲಿ 82 ಗ್ರಾಮಗಳಿಗೆ 105 ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮನ್ನು ಬೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ತಾಲೂಕಿನ 32 ಗ್ರಾಮಗಳಿಗೆ 45 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಕಡೂರು ತಾಲೂಕಿನ 48 ಗ್ರಾಮಗಳಿಗೆ 60 ಟ್ಯಾಂಕರ್ ಗಳಲ್ಲಿ ಹಾಗೂ ತರೀಕೆರೆ ತಾಲೂಕಿನ 2 ಗ್ರಾಮಗಳಿಗೆ 2 ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಟ್ಯಾಂಕರ್ ಗಳ ಬಿಲ್ ಅನ್ನು ಪ್ರತೀ 15 ದಿನಕ್ಕೊಮ್ಮೆ ಪಾವತಿ ಮಾಡಲಾಗುತ್ತಿದ್ದು, ಎಪ್ರಿಲ್ ಅಂತ್ಯದವರೆಗಿನ ಟ್ಯಾಂಕರ್ ಗಳ ಬಿಲ್ ಪಾವತಿಸಲಾಗಿದೆ. ಉಳಿದಂತೆ 60 ಗ್ರಾಮಗಳಲ್ಲಿ ಜಿಪಂ ಸಿಇಒ ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಜಾನುವಾರುಗಳು ಹೆಚ್ಚಿರುವಲ್ಲಿಗೆ ಹೆಚ್ಚು ನೀರು ಪೂರೈಸಲಾಗುತ್ತಿದ್ದು, ನೀರಿನ ಅಭಾವ ಇರುವಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿಗೆ ಬೇಡಿಕೆ ಬಂದಲ್ಲಿ ಪೂರೈಕೆಗೆ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ. ಸೆಪ್ಟೆಂಬರ್ ತಿಂಗಳವರೆಗೆ ಸಾಕಾಗುವಷ್ಟು ಮೇವಿನ ಸಂಗ್ರಹ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಬರ ಪರಿಸ್ಥಿತಿ ನಿರ್ವಹಣೆಗಾಗಿ 6 ಕೋ. ರೂ. ಅನುದಾನ ಜಿಲ್ಲಾ ಪಂಚಾಯತ್‍ಗೆ ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು 287 ಕಾಮಗಾರಿಗಳ ಪೈಕಿ 235 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಾಕಿ 52 ಕಾಮಗಾರಿಗಳು ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ. ಬರ ನಿರ್ವಹಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ 1.45 ಕೋ. ರೂ. ಮೊದಲ ಹಂತದಲ್ಲಿ ಬಿಡುಗಡೆಯಾಗಿದೆ. ಎರಡನೇ ಹಂತದಲ್ಲಿ 1.16 ಕೋಟಿ ರೂ. ಅನುದಾನ ಬಂದಿದೆ ಎಂದು ಅವರು ಮಾಹಿತಿ ನೀಡಿದರು.

ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರವಾಹ ಹಾಗೂ ಪುನರ್ವಸತಿ ಸಂಬಂಧ ಜಿಲ್ಲಾಡಳಿತ ಈಗಾಗಲೇ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇತ್ತೀಚೆಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯೆಲ್ ನೇತೃತ್ವದಲ್ಲಿ ಸಭೆಯಲ್ಲಿ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗಿದೆ. ಜಿಲ್ಲಾಡಳಿ ಕೈಗೊಂಡ ಕ್ರಮಗಳ ಬಗ್ಗೆ ಅವರು ಸಂತುಷ್ಟರಾಗಿದ್ದಾರೆ. ಜಿಲ್ಲಾದ್ಯಂತ ಪ್ರವಾಹ-ಪುನರ್ವಸತಿಗಾಗಿ 40 ಕಂಟ್ರೋಲ್ ರೂಮ್‍ಗಳನ್ನು ತೆರೆಯಲಾಗಿದೆ. ಪ್ರವಾಹ ಪುನರ್ವಸತಿಗಾಗಿ 4 ಬೋಟ್‍ಗಳು ಹಾಗೂ ಸ್ಯಾಟ್‍ಲೈಟ್ ಪೋನ್‍ಗಳನ್ನು ಖರೀದಿಸಲಾಗುವುದು. ಸಂದಿಗ್ದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಬೋಟ್‍ಗಳು ಅಗತ್ಯವಿದ್ದಲ್ಲಿ ಭದ್ರಾ ಜಲಾಶಯದಲ್ಲಿರುವ ಬೋಟ್‍ಗಳನ್ನು ಬಳಸಿಕೊಳ್ಳಲಾಗುವುದು. ಚುನಾವಣಾ ಪ್ರಕ್ರಿಯೆ ಪೂರ್ಣಗೊಡ ಬಳಿಕ ಪ್ರವಾಹ ಪುನರ್ವಸತಿ ಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿಗೆ ಸೂಕ್ತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದರು.

ಪ್ರವಾಹ-ಪುನರ್ವಸತಿಗಾಗಿ ಸರಕಾರದಿಂದ ಮೊದಲ ಹಂತದಲ್ಲಿ 19.26 ಕೋ.ರೂ.ಅನುದಾನ ಬಿಡುಗಡೆಯಾಗಿದ್ದು, ಎರಡನೇ ಹಂತದಲ್ಲಿ 12.98 ಕೋ. ರೂ. ನಂತೆ ಒಟ್ಟು 32.24 ಕೋ. ರೂ. ಬಿಡುಗಡೆಯಾಗಿದೆ. ಈ ಪೈಕಿ 24.1 ಕೋ. ರೂ. ಅನುದಾನವನ್ನು ವಿವಿಧ ಪುನರ್ವಸತಿ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಈ ಅನುದಾನವನ್ನು ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಲೋಕೋಪಯೋಗಿ ಇಲಾಖೆ ಮೂಲಕ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಬಾಕಿ ಉಳಿದ ಅನುದಾನವನ್ನು ಅಗತ್ಯ ಇರುವ ಕಾಮಗಾರಿಗಳಿಗೆ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯ ಎಂ.ಜಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಅಗತ್ಯ ಅನುದಾನ ಒದಗಿಸಲಾಗಿದೆ. ಈಗಾಗಲೇ 1.5 ಕೋ. ರೂ. ವಿವಿಧ ಕಾಮಗಾರಿಗಾಗಿ ಹಣ ಮಂಜೂರು ಮಾಡಲಾಗಿದೆ. ಸಿಎಂಸಿ ನಿಧಿಯಡಿಯಲ್ಲಿ 20 ಲಕ್ಷ ಮಂಜೂರಾಗಿದ್ದು, ಈ ಅನುದಾನದಲ್ಲಿ ಪಾರ್ಕ್ ಆವರಣದಲ್ಲಿ ಕೊಳವೆಬಾವಿ ತೆರೆಯಲಾಗುವುದು. ಉದ್ಯಾನದ ಸುತ್ತಲೂ ಮಕ್ಕಳ ರೈಲ್ವೆ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಸದ್ಯ ಪ್ರಗತಿಯಲ್ಲಿದ್ದು, ಇನ್ನು ಮೂರು ತಿಂಗಳಲ್ಲಿ ಉದ್ಯಾನವನದಲ್ಲಿನ ಕಾಮಗಾರಿಗಳು ಪೂರ್ಣಗೊಳ್ಳಲಿವೆ.
-ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News