ಮತ ಎಣಿಕೆ ಕರ್ತವ್ಯದಲ್ಲಿ ಎಚ್ಚರವಿರಲಿ: ಮಂಡ್ಯ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್

Update: 2019-05-16 17:44 GMT

ಮಂಡ್ಯ, ಮೇ 16: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 23 ರಂದು ನಡೆಯಲ್ಲಿದ್ದು, ಮತ ಎಣಿಕೆಗಾಗಿ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಜಾಗೂರಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೂಚಿಸಿದ್ದಾರೆ.

ನಗರದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕ ಅಧಿಕಾರಿಗಳು ಹಾಗೂ ಮೈಕ್ರೋ ವೀಕ್ಷಕರಿಗೆ ಮತ ಎಣಿಕೆ ಕಾರ್ಯದ ಕುರಿತು ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರದ ಸರಕಾರಿ ಮಹಾವಿದ್ಯಾಲಯದಲ್ಲಿ ಎಣಿಕೆ ಕಾರ್ಯ ನಡೆಯಲ್ಲಿದ್ದು, ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂದು ಬೆಳಗ್ಗೆ 6 ಗಂಟೆಯೊಳಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು. ಪ್ರತಿಯೊಂದು ಮತವು ತನ್ನದೇ ಆದ ಮೌಲ್ಯವನ್ನು ಹೊಂದಿರುವುದರಿಂದ ಮತ ಎಣಿಕೆ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ಹಾಗೂ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಪ್ರತಿಯೊಂದು ವಿಷಯಕ್ಕೂ ಚುನಾವಣಾ ಆಯೋಗ ನಿರ್ಧಿಷ್ಟ ಸೂಚನೆ ನೀಡಿರುವುದರಿಂದ ನಿಯೋಜಿತ ಸಿಬ್ಬಂದಿ ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ವೇಗವಾಗಿ ಹಾಗೂ ಆತುರದಿಂದ ಮತ ಎಣಿಕೆ ಕಾರ್ಯ ಮಾಡುವ ಅಗತ್ಯವಿಲ್ಲ. ಇದರಿಂದ ತೊಂದರೆ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ. ಮತ ಎಣಿಕೆ ಕಾರ್ಯ ಅತ್ಯಂತ ನಿಖರತೆ ಹಾಗೂ ಸಮರ್ಪಕವಾಗಿ ಮಾಡುವುದರಿಂದ  ಮಾತ್ರ ಉತ್ತಮ ನಿರ್ವಹಣೆ ಸಾಧ್ಯವಾಗಲಿದೆ ಎಂದು ಅವರು ಸಲಹೆ ನೀಡಿದರು.

ಮಂಡ್ಯ ವಿಧಾನಸಭಾ ಕ್ಷೇತ್ರ ಹಾಗೂ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ 12 ಟೇಬಲ್‍ಗಳನ್ನು ಇಡಲಾಗಿದ್ದು, ಉಳಿದ 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೊಠಡಿಯಲ್ಲಿ ತಲಾ 14 ಟೇಬಲ್‍ಗಳನ್ನು ಇಡಲಾಗಿದೆ. ಪ್ರತಿ ಟೇಬಲ್‍ಗೆ ತಲಾ ಒಬ್ಬರು ಮತ ಎಣಿಕೆ ಮೇಲ್ವೀಚಾರಕರು, ಮತ ಎಣಕೆ ಸಹಾಯಕರು ಹಾಗೂ ಮೈಕ್ರೋ ಅಬ್ಸರ್ವರ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಉಪ ವಿಭಾಗಧೀಕಾರಿಗಳಾದ ರಾಜೇಶ್, ಉಪವಿಭಾಗಧಿಕಾರಿ ಶೈಲಜ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣರಾಜು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News