ಚೆಸ್ ಪಂದ್ಯಾಟ: ಮಂಡ್ಯ ಚೆಸ್ ಅಕಾಡೆಮಿಯ ರಾಕೇಶ್, ತನವ್, ತನಿಷ್ಕಾ ಜೈನ್‍ಗೆ ಬಹುಮಾನ

Update: 2019-05-16 17:46 GMT

ಮಂಡ್ಯ, ಮೇ 16: ವಯನಾಡಿನ ಸುಲ್ತಾನ್ ಬತೇರಿಯ ಹೋಟೆಲ್ ಐಸಾಕ್ ರೀಜೆನ್ಸಿಯಲ್ಲಿ ಇಂಡಿಯನ್ ಚೆಸ್ ಅಕಾಡೆಮಿ ಮೇ 11ರಿಂದ 15ರವರೆಗೆ ಆಯೋಜಿಸಿದ್ದ ಪ್ರಥಮ ಅಖಿಲ ಭಾರತ ರೇಟಿಂಗ್ ಪಂದ್ಯಾವಳಿಯಲ್ಲಿ ಮಂಡ್ಯ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ರಾಕೇಶ್, ತನವ್ ಹಾಗೂ ತನಿಷ್ಕಾ ಜೈನ್ ಬಹುಮಾನ ಗಳಿಸಿದ್ದಾರೆ.

ಹದಿನಾರು ವರ್ಷದ ರಾಕೇಶ್.ಎನ್ ಪಂದ್ಯಾವಳಿಯಲ್ಲಿ ಒಂಬತ್ತು ಸುತ್ತಿನಲ್ಲಿ ಒಂದೂ ಸುತ್ತನ್ನು ಸೋಲದೆ ಹಾಗೂ ಅಂತಾರಾಷ್ಟ್ರೀಯ ಮಾಸ್ಟರ್ ರವಿ ಹೆಗ್ಡೆ ಜೊತೆಯಲ್ಲಿ ಡ್ರಾ ಮಾಡಿದ್ದು, ವಿಶೇಷವಾಗಿ ಆರುವರೆ ಪಾಯಿಂಟ್ ಗಳಿಸಿ 1600 ರೇಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಇಪ್ಪತ್ತು ಸಾವಿರ ನಗದು ಬಹುಮಾನ ಮತ್ತು 134 ರೇಟಿಂಗ್ ಪಾಯಿಂಟ್ ಹೆಚ್ಚಿಸಿಕೊಂಡಿದ್ದಾನೆ.

ಹನ್ನೆರಡು ವಯಸ್ಸಿನ ತನವ್ ಎಸ್ ಒಂಬತ್ತು ಸುತ್ತಿನಲ್ಲಿ ಐದೂವರೆ ಪಾಯಿಂಟ್ ಗಳಿಸಿ 1400 ರೇಟಿಂಗ್ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ಎಂಟು ಸಾವಿರ ನಗದು ಬಹುಮಾನ ಮತ್ತು 143 ರೇಟಿಂಗ್ ಪಾಯಿಂಟ್ ಹೆಚ್ಚಿಸಿಕೊಂಡಿದ್ದಾನೆ. ಎಂಟು ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ತನಿಷ್ಕಾ ಜೈನ್ 9 ಸುತ್ತಿನಲ್ಲಿ ಮೂರುವರೆ ಪಾಯಿಂಟ್ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾಳೆ. 

ಪಂದ್ಯಾವಳಿಯಲ್ಲಿ ದೇಶಾದ್ಯಂತ ಸುಮಾರು 264 ಸ್ಪರ್ಧಿಗಳು ಭಾಗವಹಿಸಿದ್ದು, ಇದರಲ್ಲಿ 195 ಅಂತಾರಾಷ್ಟ್ರೀಯ ರೇಟಿಂಗ್ ಆಟಗಾರರಿದ್ದರು ಎಂದು ಮಂಡ್ಯ ಚೆಸ್ ಅಕಾಡೆಮಿಯ ಕಾರ್ಯದರ್ಶಿ ಮಂಜುನಾಥ್ ಜೈನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News