ಸುಳ್ವಾಡಿ ವಿಷಪ್ರಸಾದ ಪ್ರಕರಣ: ಮಠದ ಆಸ್ತಿ ಮಹದೇವಸ್ವಾಮಿ ಹೆಸರಿಗೆ ಖಾತೆ- ಆರೋಪ

Update: 2019-05-16 17:59 GMT

ಚಾಮರಾಜನಗರ, ಮೇ 16: ಸುಳ್ವಾಡಿ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ, ಕಾರಾಗೃಹದಲ್ಲಿ ಇದ್ದುಕೊಂಡೇ ಒಂದು ಕೋಟಿಗೂ ಹೆಚ್ಚು ಬೆಲೆ ಬಾಳುವ ಸಾಲೂರು ಮಠದ ಆಸ್ತಿಯೊಂದನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಕಸಬಾ ಹೋಬಳಿಯ ಲಿಂಗಣಾಪುರ ಸರ್ವೇ ನಂ.203ರಲ್ಲಿರುವ 2 ಎಕರೆ 44 ಸೆಂಟ್ಸ್ ಜಮೀನನ್ನು 1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಿನಲ್ಲಿ ಖರೀದಿಸಲಾಗಿತ್ತು. ಆದರೆ, ಇದೀಗ ಇಮ್ಮಡಿ ಮಹದೇವಸ್ವಾಮೀಜಿ ಜೈಲಿನಲ್ಲಿದ್ದುಕೊಂಡೇ 2019ರ ಮೇ 3 ರಂದು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಸುಳ್ವಾಡಿ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮೀಜಿ ಜಾಮೀನು ಪಡೆಯಲು ಹಣ ಹೊಂದಿಸಿಕೊಳ್ಳುತ್ತಾರೆ ಎನ್ನಲಾಗಿದೆ.

2018ರ ಫೆ.20ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಅರ್ಜಿ ಕೊಟ್ಟ ಒಂದು ತಿಂಗಳ ಒಳಗೆ ವಿಲೇವಾರಿ ಮಾಡಬೇಕು. ಆದರೆ, ಒಂದು ವರ್ಷವಾದರು ಈ ಅರ್ಜಿಯ ಬಗ್ಗೆ ಏನೂ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ ಎರಡು ವಾರಗಳ ಹಿಂದೆ ಗುರುತರ ಆರೋಪ ಇರುವ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News