ಪ್ರೊ.ಭಗವಾನ್ ಆರೋಗ್ಯದ ಬಗ್ಗೆ ಡಾ.ಯೋಗಣ್ಣ ಸ್ಪಷ್ಟನೆ

Update: 2019-05-17 16:10 GMT

ಮೈಸೂರು,ಮೇ.17: ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಹೃದಯ ಬಡಿತದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರ ಹೃದಯ ಸ್ವಯಂ ನಿಯಂತ್ರಣ ಕಳೆದುಕೊಂಡು, ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ಸಯೋಗ್ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು.

ಆಸ್ಪತ್ರೆಯಲ್ಲಿ 'ವಾರ್ತಾಭಾರತಿ'ಗೆ ಮಾಹಿತಿ ನೀಡಿದ ಅವರು, ಇಂದು ಸಂಜೆ 6.30ರ ಸಮಯದಲ್ಲಿ ಭಗವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಅವರ ಅಂಗರಕ್ಷಕ ಮತ್ತು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದಾರೆ. ಇಪ್ಪತ್ತು ನಿಮಿಷ ತಡವಾಗಿದ್ದರೂ ಭಗವಾನ್ ನಮ್ಮ ಜೊತೆ ಇರುತ್ತಿರಲಿಲ್ಲ ಎಂದು ಹೇಳಿದರು.

ಭಗವಾನ್ ಅವರಿಗೆ ಹೃದಯಾಘಾತವಾಗಿಲ್ಲ. ಅವರ ಹೃದಯ ಸ್ವಯಂ ನಿಯಂತ್ರಣ ಕಳೆದುಕೊಂಡಿದೆ. ತಕ್ಷಣ ಅವರಿಗೆ ನಮ್ಮ ಹೃದ್ರೋಗ ತಜ್ಞರು ಚಿಕಿತ್ಸೆ ನೀಡಿದ್ದು, ತಾತ್ಕಾಲಿಕ ಪೇಸ್‍ಮೇಕರ್ ಅಳವಡಿಸಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಶಾಶ್ವತ ಪೇಸ್‍ಮೇಕರ್ ಅಳವಡಿಸಲಾಗುವುದು. ನಂತರ ಅವರ ದೇಹಸ್ಥಿತಿ ನೋಡಿಕೊಂಡು ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಸದ್ಯ ಅವರ ಆರೋಗ್ಯ ಸ್ಥಿತಿ ಸುದಾರಿಸಿದ್ದು, ಯಾವುದೇ ಪ್ರಾಣಾಪಾಯವಿಲ್ಲ, ಅವರಿಗೆ ಶುಗರ್, ಬಿಪಿ ಯಾವುದೂ ಇಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News