ಚಿಕ್ಕಮಗಳೂರು: ಅಕ್ರಮ ಮರಳು ಅಡ್ಡೆಗೆ ದಾಳಿ; ಹಿಟಾಚಿ ವಶಕ್ಕೆ

Update: 2019-05-17 16:22 GMT

ಚಿಕ್ಕಮಗಳೂರು, ಮೇ 17: ಯಂತ್ರೋಪಕರಣ ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖಾಧಿಕಾರಿಗಳು ಗಣಿಗಾರಿಕೆ ಸ್ಥಳದ ಮೇಲೆ ದಾಳಿ ನಡೆಸಿ ಹಿಟಾಚಿಯನ್ನು ವಶಕ್ಕೆ ಪಡೆದಿರುವ ಘಟನೆ ಗುರುವಾರ ಸಂಜೆ ಮೂಡಿಗೆರೆ ತಾಲೂಕಿನಲ್ಲಿ ವರದಿಯಾಗಿದೆ.

ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿರುವ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮವಾಗಿ ಹಿಟಾಚಿ ಯಂತ್ರದ ಮೂಲಕ ಮರಳು ಗಣಿಗಾರಿಕೆ ಮಾಡಲಾಗುತ್ತಿರುವ ಬಗ್ಗೆ ಜಿಲ್ಲಾ ಭೂ ವಿಜ್ಞಾನ ಮತ್ತು ಗಣಿ ಇಲಾಖೆಗೆ ಸ್ಥಳೀಯರು ಖಚಿತ ಮಾಹಿತಿ ನೀಡಿದ್ದರು. ದೂರಿನೆ ಮೇರೆಗೆ ಇಲಾಖಾಧಿಕಾರಿಗಳ ತಂಡ ಗುರುವಾರ ಸಂಜೆ ವೇಳೆ ಸ್ಥಳಕ್ಕೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಪರಿಶೀಲನೆ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಖಚಿತಪಡಿಸಿಕೊಂಡ ಅಧಿಕಾರಿಗಳ ತಂಡ ಪ್ರಕರಣ ದಾಖಲಿಸಿಕೊಂಡು 1 ಹಿಟಾಚಿ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗಳ ತಂಡ ವಶಕ್ಕೆ ಪಡೆದ ಹಿಟಾಚಿಯನ್ನು ಗೋಣಿಬೀಡು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಹಿಟಾಚಿಯಂತ್ರ ಸ್ಥಳೀಯ ಪ್ರಭಾವಿಗಳದ್ದೆಂದು ಹೇಳಲಾಗುತ್ತಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ ಮತ್ತೆ ಗರಿಗೆದರಿದ ಅಕ್ರಮ ಮರಳು ದಂಧೆ
ಜಿಲ್ಲೆಯಲ್ಲಿ ಈ ಹಿಂದೆ ಭಾರೀ ಸದ್ದು ಮಾಡಿದ್ದ ಅಕ್ರಮ ಮರಳು ದಂಧೆ ಕಳೆದೊಂದು ವರ್ಷದಿಂದ ತಣ್ಣಗಾಗಿತ್ತು. ಆದರೆ ಇದೀಗ ಜಿಲ್ಲಾದ್ಯಂತ ಅದರಲ್ಲೂ ವಿಶೇಷವಾಗಿ ಮೂಡಿಗೆರೆ ತಾಲೂಕಿನ ಹೇಮಾವತಿ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಮತ್ತೆ ಗರಿಗೆದರಿದೆ ಎಂದು ಸ್ಥಳೀಯರು ಪತ್ರಿಕೆ ಬಳಿ ದೂರು ಹೇಳಿಕೊಂಡಿದ್ದಾರೆ.

ಈ ಹಿಂದೆ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತಿದ್ದು, ಎಸ್ಪಿ ಅಣ್ಣಾಮಲೈ ಅವಧಿಯಲ್ಲಿ ಅಕ್ರಮ ಪರ್ಮಿಟ್‍ಗಳ ಮೂಲಕ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ಮರಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ದಂಧೆ ಹೊರಬಂದಿತ್ತು. ಈ ದಂಧೆಯಲ್ಲಿ ಕೆಲ ಅಧಿಕಾರಿಗಳು ಭಾಗಿಯಾಗಿದ್ದೂ ಬೆಳಕಿಗೆ ಬಂದಿತ್ತು. ಈ ಪ್ರಕರಣ ಬಳಿಕ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಕೊಂಚ ತಣ್ಣಗಾಗಿತ್ತು. 

ಆದರೆ ಇದೀಗ ಅಕ್ರಮ ಮರಳು ದಂಧೆಕೋರರು 1 ಪರ್ಮಿಟ್‍ಗಳನ್ನು ಪಡೆದು ದಿನಕ್ಕೆ 6-7 ಲಾರಿ ಮರಳನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆಂಬ ವ್ಯಾಪಕ ಆರೋಪ ಸಾರ್ವಜನಿಕರು, ರೈತರಿಂದ ಕೇಳಿಬರುತ್ತಿದೆ. ಇದಕ್ಕೆ ಸ್ಥಳೀಯ ಕೆಲ ಪೊಲೀಸ್ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆಂಬ ಗಂಭೀರ ಆರೋಪಗಳೂ ಕೇಳಿ ಬರುತ್ತಿವೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಅಕ್ರಮ ಮರಳು ದಂಧೆ ಪೊಲೀಸರ ನೆರಳಿನಲ್ಲಿಯೇ ನಡೆಯುತ್ತಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News