ಅಪಘಾತ ರಹಿತ ವಾಹನ ಸಂಚಾರಕ್ಕೆ ಮೂಲಸೌಕರ್ಯ ಅತ್ಯಗತ್ಯ: ಡಾ.ಬಗಾದಿ ಗೌತಮ್

Update: 2019-05-17 16:28 GMT

ಚಿಕ್ಕಮಗಳೂರು, ಮೇ 17: ಸಾರಿಗೆ ಆವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಆ ರೀತಿ ಮಾಡಿದಾಗ ಮಾತ್ರ ವಾಹನಗಳ ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೈಗೊಂಡಾಗ ಮಾತ್ರ ಅಪಘಾತ ರಹಿತ ಸಂಚಾರಕ್ಕೆ ದಾರಿಯಾಗುತ್ತದೆ ಎಂದ ಅವರು, ಚಿಕ್ಕಮಗಳೂರು ನಗರ ಪ್ರದೇಶದಲ್ಲಿ ಏಕಕಾಲದಲ್ಲಿ ಭಾರೀ ಸರಕು ಸಾಗಾಣಿಕೆ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಸಂಚರಿಸುತ್ತಿರುವುದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಮರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರಕು ಸಾಗಾಟ ವಾಹನಗಳ ಸಂಚಾರಕ್ಕೆ ಪ್ರತ್ಯೇಕವಾಗಿ ಸಮಯ ನಿಗದಿ ಮಾಡಿದಾಗ ಮಾತ್ರ ಸಾರ್ವಜನಿಕರು ಸುರಕ್ಷಿತವಾಗಿ ಓಡಾಟ ಮಾಡಲು ಸಾಧ್ಯ ಎಂದರು.

ಭಾರೀ ವಾಹನಗಳಲ್ಲಿ ಸರಕು ಸಾಗಾಣೆಗೆ ಅವಕಾಶ ಕಲ್ಪಿಸಲು ಸಮಯ ನಿಗದಿಗೊಳಿಸಲು ಲಾರಿ ಮಾಲಕರ ಸಂಘದವರು ತಮ್ಮ ಅಭಿಪ್ರಾಯವನ್ನು ವಾರದೊಳಗೆ ನೀಡಬೇಕೆಂದ ಅವರು, ಈಗಾಗಲೇ ಜಿಲ್ಲೆಯಲ್ಲಿ ಅಪಘಾತ ವಲಯಗಳೆಂದು ಸುಮಾರು 49 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಿಗೆ ಅಗತ್ಯ ಪರಿಣಾಮಕಾರಿ ರಸ್ತೆ ಸುರಕ್ಷತಾ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಇವುಗಳನ್ನು ಶೀಘ್ರದಲ್ಲಿ ಅನುಷ್ಠಾನಗೊಳಿಸಬೇಕೆಂದರು.

ಕಳೆದ ರಸ್ತೆ ಸುರಕ್ಷಾತ ಸಭೆಯಲ್ಲಿ ದ್ವಿಚಕ್ರ ವಾಹನಗಳ ಸವಾರರು ಕರ್ಕಶ ಶಬ್ಧ ಉಂಟುಮಾಡುವ ಸೈಲೆನ್ಸರ್ ಗಳನ್ನು ಅಳವಡಿಸಿಕೊಂಡು ಶಬ್ಧ ಮಾಲಿನ್ಯ ಉಂಟುಮಾಡುತ್ತಿರುವ ಬಗ್ಗೆ ಹಾಗೂ ಅದನ್ನು ಪರಿವರ್ತಿಸುವ ಗ್ಯಾರೇಜುಗಳ ಮೇಲೆ ಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿತ್ತು. ಆದರೆ ಈವರಗೆ ಯಾವುದೇ ಕ್ರಮ ತಗೆದುಕೊಂಡಿರದ ಬಗ್ಗೆ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರ ವಹಿಸಬೇಕು ಹಾಗೂ ಕ್ರಮ ತೆಗೆದುಕೊಂಡ ವಿವರಗಳನ್ನು ನೀಡಬೇಕು ಎಂದರು.

ರಸ್ತೆ ಅಪಘಾತ ನಡೆದ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಸಾರ್ವಜನಿಕರಿಗೆ ಮಾಹಿತಿ ನೀಡಿ, ಜೀವ ಉಳಿಸುವ ಬಗ್ಗೆ ಅರಿವು ಮೂಡಿಸಲು ತರಬೇತಿಯನ್ನು ನೀಡಬೇಕು ಎಂದ ಅವರು, ಜಿಲ್ಲೆಯ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ  ಅನುಕೂಲವಾಗುವಂತೆ 24*7 ರಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಬೇಕು. ಅಪಘಾತಗಳು ಸಂಭವಿಸಿದ ಸಂಧರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆ ನೀಡಲು ಬೈಕ್ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚಿಸಿದರು.

ಸರಕು ಸಾಗಣಿಕೆ ವಾಹನಗಳಲ್ಲಿ ಅನಧಿಕೃತವಾಗಿ ಕೂಲಿ ಕಾರ್ಮಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಕೊಂಡೊಯ್ಯಬಾರದೆಂದು ಉಚ್ಚನ್ಯಾಯಾಲಯದ ರಿಟ್‍ಫಿಟಿಷನ್ ನಿರ್ದೇಶನದಂತೆ ಕ್ರಮ ವಹಿಸಬೇಕೆಂದ ಜಿಲ್ಲಾಧಿಕಾರಿ, ನಗರದಲ್ಲಿ ವಾಹನಗಳ ದಟ್ಟಣೆಯಿಂದಾಗಿ ಪಾರ್ಕಿಂಗ್ ಮಾಡಲು ಹಾಲಿ ಹಳೆಯ ಜೈಲಿನ ಜಾಗದಲ್ಲಿ ಮುಂದಿನ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವವರೆಗೂ ಅವಕಾಶ ಮಾಡಿಕೊಡಬೇಕೆಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಹರೀಶ್ ಪಾಂಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಎಂ. ಬಿ.ಶಿರೊಳ್ಕರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಪಘಾತವಾದ ಸಂದರ್ಭದಲ್ಲಿನ ಯಾವ ಕಾರಣಕ್ಕೆ ಅಪಘಾತವಾಯಿತು ಎಂಬುವುದನ್ನು ಅರಿಯಲು ಪೊಲೀಸ್ ಇಲಾಖೆ ಹಾಗೂ ಪಿ.ಡಬ್ಲ್ಯೂ.ಡಿ ಅಥವಾ ಹೈವೆ ಅಥಾರಿಟಿ ಅಧಿಕಾರಿಗಳು ಸ್ಥಳ ಪರೀಕ್ಷಿಸಿ ಯಾವ ಕಾರಣಕ್ಕಾಗಿ ಅಪಘಾತವಾಯಿತು ಎಂಬ ಬಗ್ಗೆ ವರದಿಯನ್ನು ಸಿದ್ಧಪಡಿಸಬೇಕು. ನಗರದ ಐಜಿ ರಸ್ತೆಯ ಮಧ್ಯೆ ಮಾರ್ಗದಲ್ಲಿ ರಸ್ತೆ ವಿಭಜಕವನ್ನು ಅಳವಡಿಸುವುದರಿಂದ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯ. ಇದರಿಂದ ವಾಹನಗಳು ಎಲ್ಲೆಂದರಲ್ಲಿ ಹಾಗೂ ಅಡ್ಡ ರಸ್ತೆಗಳಿಂದ ಅಡ್ಡಾದಿಡ್ಡಿಯಾಗಿ ಒಡಾಡುವುದನ್ನು ತಡೆಯಲು ಸಾಧ್ಯವಿದೆ. ಈ ಸಂಬಂಧ ಅಧಿಕಾರಿಗಳು ಶೀಘ್ರ ಕ್ರಮವಹಿಸಬೇಕು
-ಹರೀಶ್‍ ಪಾಂಡೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News