ಕೃಷ್ಣೆಯ ಒಡಲಲ್ಲಿರುವ ಗ್ರಾಮಗಳಲ್ಲೂ ನೀರಿಗೆ ಹಾಹಾಕಾರ: ತಾಪಂ ಸಿಇಒ ರಿಂದ ಪರ್ಯಾಯ ವ್ಯವಸ್ಥೆ

Update: 2019-05-17 16:38 GMT
ಸಾಂದರ್ಭಿಕ ಚಿತ್ರ

ಚಿಕ್ಕೋಡಿ, ಮೇ 17: ಕೃಷ್ಣಾ ನದಿ ದಡದಲ್ಲಿರುವ ಮೋಳವಾಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಂಡ ಹಿನ್ನೆಲೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪ ಗ್ರಾಮಕ್ಕೆ ಭೇಟಿ ನೀಡಿ ಟ್ಯಾಂಕರ್ ಹಾಗೂ ಕೊಳವೆ ಬಾವಿ ವ್ಯವಸ್ಥೆ ಮಾಡಿದರು.

ಅನೇಕ ವರ್ಷಗಳ ಬಳಿಕ ಕಾಗವಾಡ ತಾಲೂಕಿನ ಕೃಷ್ಣಾನದಿ ತೀರದಲ್ಲಿರುವ ಕುಸನಾಳ, ಮೋಳವಾಡ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮೋಳವಾಡ ಅಥಣಿ ಪೂರ್ವ ಭಾಗದ ಗ್ರಾಮಗಳಿಗೆ ಟ್ಯಾಂಕರ್‌ನಿಂದ ನೀರು ಪೂರೈಸುತ್ತಿರುವಂತೆಯೇ ಇದೀಗ ಈ ಗ್ರಾಮಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ತಾಪಂ ಸಿಇಒ, ಕಳೆದ ಎರಡು ತಿಂಗಳಿಂದ ಕೃಷ್ಣಾ ನದಿ ಬತ್ತಿ ಹೋಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಮೋಳವಾಡದಲ್ಲಿ ಹೊಸದಾಗಿ ಎರಡು ಕೊಳವೆ ಬಾವಿಗಳು, ನಾಲ್ಕು ಟ್ಯಾಂಕರ್ ನೀರಿನ ವ್ಯವಸ್ಥೆಗೆ ಮಂಜೂರಾತಿ ನೀಡಲಾಗಿದೆ. ಜನರು ನೀರಿನ ಮಹತ್ವ ಅರಿತುಕೊಂಡು ಮಿತಿಯಿಂದ ಬಳಸಬೇಕೆಂದು ಹೇಳಿದರು.

ಮೋಳವಾಡ-ಕುಸನಾಳ ಗ್ರಾಪಂ ಅಧ್ಯಕ್ಷ ಜೈಪಾಲ ಯರೆಂಡೊಲೆ ಮಾತನಾಡಿ, ಈವರೆಗೆ ಮೋಳವಾಡ ಗ್ರಾಮಕ್ಕೆ ನೀರಿನ ಕೊರತೆ ಈ ರೀತಿ ಇರಲಿಲ್ಲ. ನದಿ ಬತ್ತಿ ಹೋಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಸಮಸ್ಯೆ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News