ಕೊಳ್ಳೇಗಾಲ: ಬಿರುಗಾಳಿ ಸಹಿತ ಭಾರೀ ಮಳೆ; ಅಪಾರ ಆಸ್ತಿಪಾಸ್ತಿ ನಷ್ಟ

Update: 2019-05-17 16:56 GMT

ಕೊಳ್ಳೇಗಾಲ, ಮೇ.17: ಅಲಿಕಲ್ಲು ಸಹಿತ ಭಾರೀ ಬಿರುಗಾಳಿ ಮಳೆಗೆ ಪಟ್ಟಣದಲ್ಲಿ ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಹಾಗೂ ಮುಡಿಗುಂಡ, ಬೆಂಡರಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.

ನಗರಸಭೆ ಪಕ್ಕದ ವಕೀಲ ರಾಮಯ್ಯ ರಸ್ತೆಯಲ್ಲಿ ಛತ್ರಿ ಮರವೊಂದು ಶಿಕ್ಷಕ ಶಂಕರ್ ರವರ ಮನೆಯ ಮೇಲೆ ಉರುಳಿ ಬಿದ್ದಿದೆ. ಇದರಿಂದ ಮನೆಯ ಎರಡು ಬದಿಯ ಗೋಡೆಗಳು ಹಾಗೂ ಹೆಂಚುಗಳು ಸಂಪೂರ್ಣ ಜಖಂಗೊಂಡಿದೆ. ಪೊಲೀಸ್ ಕ್ವಾಟ್ರಸ್‍ನ ಹಿಂಬದಿಯ ಕಾಪೌಂಡ್‍ನ ಬಳಿ ಇದ್ದ ನೀಲಿಗಿರಿ ಮರಗಳು ಮುರಿದು ಬಿದ್ದು, ಮುಖ್ಯಪೇದೆ ನಟರಾಜುರವರ ದ್ವಿಚಕ್ರ ವಾಹನ ಹಾಗೂ ಮಧು ಎಂಬವರ ದ್ವಿಚಕ್ರ ವಾಹನ ಹಾಗೂ ವಿದ್ಯುತ್ ಕಂಬ ಜಖಂಗೊಂಡಿದೆ. ನಾಯಕರ ಚಿಕ್ಕ ಚಾವಡಿ ಬೀದಿಯಲ್ಲಿ ಎರಡು ಮನೆಗಳ ಮೇಲೆ ಮರ ಬಿದ್ದು ಮನೆಯ ಮೇಲ್ಚಾವಣಿ ಹಾಗೂ ಇನ್ನಿತರ ಸಾಮಾಗ್ರಿಗಳು ಹಾಳಾಗಿದೆ. ಉಳಿದಂತೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಅಲ್ಲದೆ ಪಟ್ಟಣದ ಬಾಳೆಪೇಟೆ ಪುಟಬಾತ್ ತಿಂಡಿ ವ್ಯಾಪಾರಿ ಶಿವಕುಮಾರರವರ ನೈಟ್ ಹೋಟೆಲ್ ತಳ್ಳುಗಾಡಿ ಹಾಗೂ ಭೀಮನಗರದ ಧೀಡಿದ್‍ ಕೇರಿಯ ಹುಚ್ಚಯ್ಯರವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು, ಅಪಾರ ನಷ್ಟ ಉಂಟಾಗಿದೆ. ನಗರದ ಸಾಮಂದಿಗೇರಿ, ಅಗ್ರಹಾರ, ದೇವಾಂಗಪೇಟೆ, ಹಳೇ ಕುರುಬರ ಬೀದಿ, ಎಲ್‍ಐಸಿ ಕ್ವಾಟ್ರಸ್, ಹೊಸ ಅಣಗಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಹಲವೆಡೆ ವಿದ್ಯುತ್ ಕಂಬದಲ್ಲಿ ಅಳವಡಿಸಿರುವ ತಂತಿಗಳ ಮೇಲೆ ಮರದ ರೆಂಬೆ ಬಿದ್ದಿದ್ದು, ನಗರಸಭೆಯ ಮೇಲ್ಚಾವಣಿಗೆ ಹಾಕಿದ್ದ ಪ್ಲಾಸ್ಟಿಕ್ ಸೀಟ್‍ಗಳು ಹಾರಿಹೋಗಿವೆ. ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ದ್ವಿಚಕ್ರ ಹಾಗೂ ಕಾರಿನ ಮೇಲೆ ಬೇವಿನ ಮರದ ಕೊಂಬೆ ಮುರಿದು ಬಿದ್ದ ಬಗ್ಗೆ ವರದಿಯಾಗಿದೆ.

ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿರವರು ವಕೀಲ ರಾಮಯ್ಯರ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಷ್ಟಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದರು.

ನಗರಸಭೆ ಆಯುಕ್ತ ನಾಗಶೆಟ್ಟಿ ಮಾತನಾಡಿ, ಬಿರುಗಾಳಿ ಮತ್ತು ಮಳೆಯಿಂದ ಬಿದ್ದಿರುವ ಮರಗಳ ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಡಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News