ತುಮಕೂರು: ಶಾಸಕ ಗೌರಿಶಂಕರ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

Update: 2019-05-17 17:03 GMT

ತುಮಕೂರು, ಮೇ 17: ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ ಗೌರಿಶಂಕರ್ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದರ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡುವುದಾಗಿ ಜಿ.ಪಂ.ಸದಸ್ಯೆ ಅನಿತಾ ಸಿದ್ದೇಗೌಡ ತಿಳಿಸಿದ್ದಾರೆ.

ಗೂಳೂರು ಹೋಬಳಿ ಡಿ.ಕೊರಟಗೆರೆ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೀವ್ರ ಬರಗಾಲ ಇರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರು ಮೋಜು ಮಸ್ತಿಗಾಗಿ ವಿದೇಶಿ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ಹೋಗಿರುವ ಬಗ್ಗೆ ಸುರೇಶಗೌಡರ ಫ್ಯಾನ್ ಪೇಜ್ ನಲ್ಲಿ ಕಾರ್ಯಕರ್ತರು ಪೋಸ್ಟ್ ಮಾಡಿರುವುದಕ್ಕೆ, ಗೌರಿಶಂಕರ್ ಬೆಂಬಲಿಗರು ಅಸಭ್ಯವಾಗಿ ಬಿಜೆಪಿ ಮಹಿಳಾ ಕಾರ್ಯಕರ್ತರ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿದರು.

ಹಾಲಿ ಶಾಸಕರಿಗೆ ಬರಗಾಲ ಕಾಣದೆ ಮೋಜು ಮಸ್ತಿಗಾಗಿ ಸಿಂಗಾಪುರಕ್ಕೆ ಹೋಗಿದ್ದಾರೆ. ಇದನ್ನು ಪ್ರಶ್ನಿಸಿದವರ ಬಗ್ಗೆ ಹಾಗೂ ಬಿಜೆಪಿ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲವೇ? ಇಂತಹ ಸಂಸ್ಕೃತಿಯನ್ನು ಜೆಡಿಎಸ್ ಶಾಸಕರು ಕಲಿಸಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಣ್ಣು ಮಕ್ಕಳ ಬಗ್ಗೆ ಅವಹೇಳನವಾಗಿ ಫೇಸ್ಬುಕ್ ನಲ್ಲಿ ಕಮೆಂಟ್ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕಲಾವತಿ ಆಗ್ರಹಿಸಿದರು.

ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿರುವುದು ಅಲ್ಲದೆ ಅವಮಾನ ಮಾಡಿದ್ದಾರೆ. ಶಾಸಕ ಡಿ.ಸಿ ಗೌರಿಶಂಕರ್ ಮತ್ತು ಅವರ ಬೆಂಬಲಿಗರಿಂದ ಗ್ರಾಮಾಂತರ ಕ್ಷೇತ್ರದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ನಮಗೆ ಸೂಕ್ತ ರಕ್ಷಣೆ ನೀಡಬೇಕು. ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಏನಾದರೂ ಆದರೆ ಶಾಸಕ ಡಿ.ಸಿ ಗೌರಿಶಂಕರ್ ಮತ್ತು ಜೆಡಿಎಸ್ ಬೆಂಬಲಿಗರೇ ಕಾರಣರಾಗುತ್ತಾರೆ ಎಂದು ಜಿ.ಪಂ ಸದಸ್ಯ ವೈ.ಎಚ್ ಹುಚ್ಚಯ್ಯ ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಜಿ.ಪಂ ಸದಸ್ಯರಾದ ಶಿವಕುಮಾರ್ ತಾ.ಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ದಲಿತ ಮುಖಂಡ ಸಾಸಲು ಮೂರ್ತಿ, ಹೊನ್ನುಡಿಕೆ ಮಾಜಿ ಅಧ್ಯಕ್ಷ ಶಿವರಾಜು ಮಾಜಿ ಉಪಾಧ್ಯಕ್ಷ ಕಾಂತರಾಜು, ಹೊಳಕಲ್ಲು ಕಿರಣ ಅಂಜಿನಪ್ಪ ಗಿರೀಶ ನರುಗನಹಳ್ಳಿ ಕುಮಾರ್, ಗಂಗಮ್ಮ ಶಿವಮ್ಮ ಅಕ್ಕಮ್ಮ ಲಕ್ಮಕ್ಕ ದ್ರಾಕ್ಷಾಯಿಣಿ ಮತ್ತು ನೂರಾರು ಬೆಂಬಲಿಗರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News