ಕುತೂಹಲ ಸ್ವರೂಪದ ಕಪ್ಪೆ ಅನ್ವೇಷಣೆ: ಡಾ.ದಿನೇಶ್

Update: 2019-05-17 17:34 GMT

ಚಿಕ್ಕಮಗಳೂರು, ಮೇ 17: ಭಾರತೀಯ ವಿಜ್ಞಾನ ಮಂದಿರ, ಭಾರತೀಯ ಪ್ರಾಣಿ ಸರ್ವೇಕ್ಷಣಾಲಯದ ವಿಜ್ಞಾನಿಗಳು ಕೇರಳ ರಾಜ್ಯದ ವಯನಾಡ್ ಬೆಟ್ಟ ವ್ಯಾಪ್ತಿಯಲ್ಲಿ ಕುತೂಹಲ ಸ್ವರೂಪದ ಕಪ್ಪೆ ಇರುವುದನ್ನು ಕಂಡು ಹಿಡಿದಿದ್ದಾರೆ ಎಂದು ಜೀವವೈವಿಧ್ಯ ಸಂಶೋಧಕ ಡಾ.ದಿನೇಶ್ ತಿಳಿಸಿದ್ದಾರೆ.

ಡಾ.ವಿಜಯಕುಮಾರ್, ಚಿಕ್ಕಮಗಳೂರು ಜಿಲ್ಲೆಯ ಕಬ್ಬಿನಹಳ್ಳಿಯ ಡಾ.ದಿನೇಶ್ ಹಾಗೂ ಡಾ.ಕಾರ್ತಿಕ್ ನೇತೃತ್ವದ ತಂಡವು 2010ರಲ್ಲಿ ಈ ಕಪ್ಪೆಯನ್ನು ಕುರಿಚಿಯಾರ್ ಮಲ ಬೆಟ್ಟದ ತಪ್ಪಲಿನ ಶೋಲಾ ಕಾಡುಗಳಲ್ಲಿ ಅನ್ವೇಷಿಸಿದೆ. ಈ ಅನ್ವೇಷಣೆಯನ್ನು ಅಮೆರಿಕದ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯ ಹಾಗೂ ಪ್ಲೋರಿಡಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ಈ ಕಪ್ಪೆಗೆ ಅಸ್ಟ್ರೋಬಟ್ರಾಕಸ್ ಕುರಿಚಿಯಾನಾ ಎಂದು ವರ್ಗೀಯ ಶಾಸ್ತ್ರದ ಪ್ರಕಾರ ನಾಮಕರಣ ಮಾಡಲಾಗಿದೆ. ಈ ಅನ್ವೇಷಣೆಯನ್ನು ಅಂತರ್‌ರಾಷ್ಟ್ರೀಯ ಪ್ರಖ್ಯಾತಿಯ ಪೀರ್ ಜೆ ಎಂಬ ಜರ್ನಲ್‌ನಲ್ಲಿನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಕಪ್ಪೆಯ ಕಣ್ಣುಗಳಲ್ಲಿ ಮತ್ತು ದೇಹದ ಇಕ್ಕೆಲಗಳಲ್ಲಿ ನಕ್ಷತ್ರ ಪುಂಜಗಳನ್ನು ಹೋಲುವ ಗುರುತುಗಳು ಇರುವುದರಿಂದ ಹಾಗೂ ವಯನಾಡಿನ ಕುರಿಚಿಯ ಬುಡಕಟ್ಟು ಸಮುದಾಯವನ್ನು ಗೌರವಿಸಲು ಈ ಕಪ್ಪೆಗೆ ಅಸ್ಟ್ರೋಬಟ್ರಾಕಸ್ ಕುರಿಚಿಯಾನಾ ಎಂದು ನಾಮಕರಣ ಮಾಡಲಾಗಿದೆ ಡಾ.ದಿನೇಶ್ ತಿಳಿಸಿದ್ದಾರೆ. 

ಜೈವಿಕ ತಂತ್ರಜ್ಞಾನದ ವಿಶ್ಲೇಷಣೆಯ ಪ್ರಕಾರ ಈ ಹೊಸ ಪ್ರಜಾತಿಯ ಕಪ್ಪೆಯ ಇತ್ತೀಚಿನ ಪೂರ್ವಜರು ಸುಮಾರು 60 ರಿಂದ 70 ದಶಲಕ್ಷ ವರ್ಷಗಳ ಹಿಂದೆ ವಿಕಸನಗೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಹೊಸ ಉಪ ಕುಟುಂಬಕ್ಕೆ ಸೇರಿಸಲಾಗಿದೆ. ಇಂತಹ ಅನ್ವೇಷಣೆಗಳು ಪ್ರಾಣಿ ವರ್ಗೀಕರಣ ಶಾಸ್ತ್ರದಲ್ಲಿ ಶತಮಾನದಲ್ಲಿ ಒಮ್ಮೆ ಮಾತ್ರ ಕಂಡು ಬರುವಂಥ ಸಂಶೋಧನೆಯಾಗಿದೆ. 60 ರಿಂದ 70 ದಶಲಕ್ಷ ವರ್ಷಗಳಿಂದ ಯಾವುದೇ ರೂಪವಿನ್ಯಾಸದ ವಿಕಾಸನವಿಲ್ಲದೇ ಪುರಾತನ ಕುತೂಹಲ ಸ್ವರೂಪವನ್ನು ಕಾಯ್ದುಕೊಂಡಿರುವುದರಿಂದ ಈ ಕಪ್ಪೆಯನ್ನು ಜೀವಂತ ಪಳೆಯುವಿಕೆ ಎಂದು ಪರಿಗಣಿಸಲಾಗಿದೆ. ಇಂದಿನ ಸಾಮೂಹಿಕ ಅಳಿವಿನ ಯುಗದಲ್ಲಿ 60 ರಿಂದ 80 ಮಿಲಿಯನ್ ವರ್ಷ ಪುರಾತನ ಸಂತತಿಯ ಆವಿಷ್ಕಾರ ನಮಗೆ ಉಭಯಚರ ವೈವಿಧ್ಯತೆಯ ಬಗ್ಗೆ ಇರುವ ಜ್ಞಾನದ ಗ್ರಹಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಡಾ.ದಿನೇಶ್ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಮಂದಿರ ಮತ್ತು ಭಾರತೀಯ ಪ್ರಾಣಿ ಸರ್ವೇಕ್ಷಣೆಯ ವಿಜ್ಞಾನಿಗಳ ಪ್ರಕಾರ ವಿಚಿತ್ರವಾದ ದೇಹ ರೂಪ, ದೇಹದ ಗೊಂದಲಮಯವಾದ ಬಣ್ಣ ಮಾದರಿಗಳು, ಸಂಕೀರ್ಣವಾದ ವಿಕಸನ ಮೂಲಗಳಿಂದಾಗಿ ಈ ಹೊಸ ಜಾತಿಗಳ ಘೋಷಣೆ ವಿಳಂಬವಾಯಿತು ಎಂದಿದ್ದಾರೆ. ವಿಜ್ಞಾನಿಗಳ ಪ್ರಕಾರ ಈ ಹೊಸ ಪ್ರಜಾತಿಯ ಕಪ್ಪೆಯು ಅನುವಂಶಿಕವಾಗಿ ಪಶ್ಚಿಮಘಟ್ಟದ ನೀಯ್ಕೃಬಟ್ರಾಕಸ್ ಹಾಗೂ ಶ್ರೀಲಂಕಾದ ಲಂಕನೆಕ್ಟ್ ಎಂಬ ಕುಲದ ಕಪ್ಪೆಗಳನ್ನು ಹೋಲು ತ್ತಿದ್ದು, ಸರಿಯಾದ ಅನುವಂಶಿಕ ಸಂಬಂಧ ಇನ್ನು ತಿಳಿಯಬೇಕಿದೆ ಎಂದು ಡಾ.ದಿನೇಶ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News