ಅಂಬೇಡ್ಕರ್ ಚಿಂತನೆ ಒಂದು ಸಮುದಾಯಕ್ಕೆ ಸೀಮಿತವಲ್ಲ: ಡಾ.ಬಿ.ಪಿ.ಮಹೇಶ್‍ ಚಂದ್ರಗುರು

Update: 2019-05-17 17:38 GMT

ಮಡಿಕೇರಿ ಮೇ 17 : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ಏಳಿಗೆಗಾಗಿ ಶ್ರಮಿಸದೆ ಪ್ರತಿಯೊಬ್ಬರ ಪ್ರಗತಿಗಾಗಿ ಚಿಂತನೆ ನಡೆಸಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣಕ್ಕೆ ಇಂದು ದೇಶದಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಸ್ಥಾನವನ್ನು ಅಲಂಕರಿಸುವ ಸಾಮರ್ಥ್ಯವನ್ನು ಪ್ರತಿಯೊಬ್ಬರು ಹೊಂದಿದ್ದಾರೆ ಎಂದು ಮೈಸೂರು ಮಾನಸ ಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಪಿ.ಮಹೇಶ್‍ಚಂದ್ರಗುರು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ, ಪ.ಪಂ ನೌಕರರ ಸಂಘದ ಪುತ್ತೂರು ವಿಭಾಗ, ಮಡಿಕೇರಿ ಘಟಕದ ವತಿಯಿಂದ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ವರ್ಗಗಳ ಉದ್ಧಾರಕ್ಕಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಮಹಿಳೆಯರಿಗೆ ಉದ್ಯೋಗ, ಶಿಕ್ಷಣ, ರಾಜಕೀಯ ಮಿಸಲಾತಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಿದರು. ಅವರು ರಚಿಸಿದ ಸಂವಿಧಾನದ ಬಲದಿಂದಲೇ ಅನೇಕರು ರಾಜಕೀಯವಾಗಿ ಯಶಸ್ಸನ್ನು ಗಳಿಸಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇಂದು ಅಡ್ಜಸ್ಟ್ ಮೆಂಟ್ ರಾಜಕಾರಣ ನಡೆಯುತ್ತಿದೆ, ಆದರೆ ಡಾ.ಅಂಬೇಡ್ಕರ್ ಅವರು ಶಕ್ತಿ ರಾಜಕಾರಣ ಮಾಡದೆ, ಮುಕ್ತಿ ರಾಜಕಾರಣದ ಮೂಲಕ ಗಮನ ಸೆಳೆದರು ಎಂದು ಡಾ.ಬಿ.ಪಿ.ಮಹೇಶ್‍ಚಂದ್ರಗುರು ಹೇಳಿದರು.

ದೇವಾಲಯ ಕಟ್ಟಲು ದಲಿತರ ಪರಿಶ್ರಮ ಬೇಕು, ಆದರೆ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನೀಡುವುದಿಲ್ಲ ಎಂದು ವಿಷಾದಿಸಿದ ಅವರು, ಹುಟ್ಟಿನಿಂದ ಯಾರೂ ಕನಿಷ್ಠರಲ್ಲ, ಯಾರೂ ಶ್ರೇಷ್ಠರಲ್ಲ. ಪ್ರಕೃತಿದತ್ತವಾಗಿ ಮತ್ತು ಕಾನೂನುಬದ್ಧವಾಗಿ ಎಲ್ಲರೂ ಒಂದೇ, ಆದ್ದರಿಂದ ದಲಿತ ಶಕ್ತಿಯನ್ನು ಯಾರೂ ಕಡೆಗಣಿಸಬಾರದು ಎಂದರು.

ದೇವಾಲಯಗಳ ನಿರ್ಮಾಣಕ್ಕಿಂತ ಗ್ರಂಥಾಲಯದ ನಿರ್ಮಾಣದ ಅವಶ್ಯಕತೆ ಇದೆ. ಗ್ರಂಥಾಲಯ ಹೆಚ್ಚಿದಷ್ಟು ಜ್ಞಾನ ಹೆಚ್ಚಾಗುತ್ತದೆ, ಅತಿಯಾಗಿ ದೇವರನ್ನು ನಂಬುವುದಕ್ಕಿಂತ ದೈವತ್ವ ಪಡೆಯುವುದು ಉತ್ತಮ ಎಂದು ಮಹೇಶ್ಚಂದ್ರಗುರು ಸಲಹೆ ನೀಡಿದರು.

ಮೈಸೂರಿನ ಗಾಂಧಿನಗರದ ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷರಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾಜಿಕ ಹಕ್ಕನ್ನು ನೀಡುವ ಮೂಲಕ ಮಹಿಳೆಯರು ಪುರುಷರಂತೆ ಸಮಾನರು, ಅವರಿಗೂ ಬದುಕುವ ಹಕ್ಕಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಜಾತಿಯನ್ನು ನಾಶಮಾಡಬೇಕು, ಸರ್ವ ಸಮಾನ ದೇಶವನ್ನು ನೋಡಬೇಕು ಎನ್ನುವ ಗುರಿ ಹೊಂದಿದ್ದರು ಎಂದರು.

ಭಾರತ ದೇಶ ಗರ್ಭಗುಡಿಯ ಸಂಸ್ಕೃತಿಯ ದೇಶವಲ್ಲ, ಬದಲಿಗೆ ಗ್ರಂಥಾಲಯದ ಸಂಸ್ಕೃತಿಯನ್ನು ಹೊಂದಿರುವ ದೇಶ. ಪ್ರಸ್ತುತ ದಿನಗಳಲ್ಲಿ ನಾಯಿಯನ್ನು ಪ್ರೀತಿಸುವವರಿಗೆ ಜನರನ್ನು ಪ್ರೀತಿಸುವ ಮನಸ್ಸಿಲ್ಲ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ಅಂಬೇಡ್ಕರ್ ಅವರ ಜಯಂತಿ ವಿಚಾರ ಮತ್ತು ಜ್ಞಾನದ ಆಧಾರದ ಜಯಂತಿಯಾಗಬೇಕೆ ಹೊರತುಒಂದು ಜಾತಿಗೆ ಸೀಮಿತವಾಗಬಾರದು. ಸಂವಿಧಾನ ಎಲ್ಲರ ರಕ್ಷಾಕವಚ ಆದಾಗ ಮಾತ್ರ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅರ್ಥಪೂರ್ಣವಾಗಲಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು. 

ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೇವದಾಸ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದೇವಾಲಯಗಳ ನಿರ್ಮಾಣಕ್ಕಿಂತ ಶಾಲೆಗಳ ನಿರ್ಮಾಣ ಹೆಚ್ಚಾದಾಗ ಮಾತ್ರ ದೇಶ ಉದ್ಧಾರವಾಗಲು ಸಾಧ್ಯ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬಹುದಾಗಿದೆ ಎಂದರು.

ಕ.ರಾ.ರ.ಸಾ ನಿಗಮ, ಪ.ಜಾ, ಪ.ಪಂ. ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾದ ವೆಂಕರವಣಪ್ಪ ಮಾತನಾಡಿ, ಅಂಬೇಡ್ಕರ್ ಅವರ ಜೀವನದ ಕುರಿತು ಮಾಹಿತಿ ನೀಡಿದರು. ಅಲ್ಲದೇ ನೌಕರರ ಸಂಘ ಬೆಳೆದು ಬಂದ ರೀತಿಯ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಭಾಗ ಮಟ್ಟದಲ್ಲಿ ಬೆಳ್ಳಿಪದಕ ಪಡೆದ ಪುತ್ತೂರು ಘಟಕದ ಸೀತಾರಾಮ, ಅಪ್ಪು ನಾಯ್ಕ, ಹೆನ್ರಿ ಗಲ್ಬಾವೊ, ಡೊಂಬಯ್ಯ, ಸುಳ್ಯ ಘಟಕದ ಸೀನ ನಾಯ್ಕ, ಬಿ.ಸಿ. ರಸ್ತೆ ಘಟಕದ ಶ್ರೀ ರಾಮ, ಮಡಿಕೇರಿ ಘಟಕದ ಯು.ಸಿ. ಕಾರ್ಯಪ್ಪ, ಮಾರ್ಷಲ್ ರಾಡ್ರಿಗಸ್, ಕೆ.ಪಿ. ದಿನೇಶ, ಸಂತೋಷ್ ಹಾವಿನಾಳ, ಬಾಪೂ ಶಿವಾಯಿಗೋಳ, ಧರ್ಮಸ್ಥಳ ಘಟಕದ ಎಸ್.ವಿ. ಬಸವರಾಜು, ಕಲ್ಲಪ್ಪ ಕಾಂಬ್ಲೆ, ಕೆ.ಆನಂದ, ನಾರಾಯಣ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪುತ್ತೂರು, ಕ.ರಾ.ರಸಾನಿ ನಿಗಮದ ವಿಭಾಗೀಯ ನಿಯಂತ್ರಣ ಅಧಿಕಾರಿ ದೀಪಕ್ ಕುಮಾರ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ರೇವಣ್ಣ, ರಾಜ್ಯ ಉಪಾಧ್ಯಕ್ಷರಾದ ಅಶೋಕ ರಾ. ಭಜಂತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ವೇಣುಗೋಪಾಲ, ಕ.ರಾ.ರ.ಸಾ. ನಿಗಮ, ಪ.ಜಾ, ಪ.ಪಂ. ನೌಕರರ ಸಂಘದ ವಲಯ ಅಧ್ಯಕ್ಷರಾದ ಎಂ. ಸಿದ್ದಪ್ಪ ನೇಗಲಾಲ, ರಾಜ್ಯ ಖಜಾಂಚಿ ಎಂ. ಶಾರದಯ್ಯ, ವಲಯ ಪ್ರಧಾನ ಕಾರ್ಯದರ್ಶಿ ಎಂ.ರವಿಪ್ರಕಾಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಹಾಲೂರು ವೈದ್ಯಧಿಕಾರಿ ಡಾ. ಹೆಚ್.ಟಿ. ತಿಮ್ಮಯ್ಯ, ಮಡಿಕೇರಿ ತೋಟಗಾರಿಕೆ ಸಹಾಯಕ ನಿರ್ದೇಶಕರು ರಾಮದಾಸ್, ಕರ್ನಾಟಕ ದಲಿತ ಪರಿವರ್ತನ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನಯ್ ಕುಮಾರ್ ಹಾಗೂ ಮತ್ತಿರರು ಉಪಸ್ಥಿತರಿದ್ದರು.

ಕಾರ್ಯಕ್ರದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋದೊಂದಿಗೆ ಶ್ರೀ ಕಂಠನಾಯಕ ತಂಡದವರಿಂದ ಮತ್ತು ಕಾರ್ಮಿಕರಿಂದ ಮನೋರಂಜನೆ ಮತ್ತು ಸಾಂಸ್ಕರತಿಕ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ನಗರದ ಸರ್ಕಾರಿ ಬಸ್ ಡಿಪೋ ಬಳಿಯಿಂದ ಬಸ್ ನಿಲ್ದಾಣದವರೆಗೆ ಡಾ.ಅಂಬೇಡ್ಕರ್ ರಥದ ಮೆರವಣಿಗೆ ಸಾಗಿತು. ಈ ಸಂದರ್ಭ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪಣ್ಣೇಕರ್, ಜಿ.ಪಂ ಲಕ್ಷ್ಮೀಪ್ರಿಯ, ಡಿವೈಎಸ್‍ಪಿ ಸುಂದರರಾಜ್ ಮತ್ತಿತರ ಪ್ರಮುಖರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News