ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲ: ಎಸ್.ಆರ್.ಹಿರೇಮಠ್

Update: 2019-05-17 17:42 GMT

ಮೈಸೂರು,ಮೇ.17: ಕಳೆದ ಬಾರಿಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ವೇಳೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸ್, ಪ್ರತಿಯೊಬ್ಬರ ಕುಟುಂಬಕ್ಕೆ 15 ಲಕ್ಷ ರೂ. ಹಣ, ರೈತರಿಗಾಗಿ ಡಾ.ಸ್ವಾಮಿನಾಥನ್ ವರದಿ ಜಾರಿ ಮೊದಲಾದವು ಸೇರಿದಂತೆ ನೀಡಿದ್ದ ಅನೇಕ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಮುಖ್ಯಸ್ಥ ಮತ್ತು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಹಿಂದೆ ನಿಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹಾಗಂತ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ನಾನು ಹೇಳುವುದಿಲ್ಲ ಎಂದು ಹೇಳಿದರು.

ದೇಶದಲ್ಲಿ ರಾಜ್ಯಪಾಲರೊಬ್ಬರು ಬಿಜೆಪಿ ಮತ ಹಾಕಿ ಎನ್ನುವುದು ನಡೆದಿದ್ದರೆ, ಮತ್ತೊಬ್ಬರು ದೇಶದ ಸೈನ್ಯ ಮೋದಿ ಸೈನ್ಯ ಎನ್ನುತ್ತಾರೆ. ಇನ್ನು ಪ್ರಧಾನಿ ಸಹ ಬಿಜೆಪಿಗೆ ನೀಡುವ ಮತ ದೇಶದ ಸೈನಿಕರಿಗೆ ನೀಡುವ ಮತ ಎಂದು ಸೈನಿಕರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಹೀಗೆ ದೇಶದಲ್ಲಿ ಈ ರೀತಿಯ ಪರಿಸ್ಥಿತಿ ಇದೆ ಎಂದರು.

ರಾಜಕಾರಣಿಗಳು ಆಮಿಷಗಳಿಗೆ ಒಳಗಾಗಿ ಮಾಡುವ ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾಡುವ ಗಂಭೀರ ಅಪರಾಧವಾಗಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರ ಪಾತ್ರವೂ ಇದೆ. ಆದ್ದರಿಂದ ಅವರಲ್ಲಿ ಸಂವಿಧಾನ ನೀಡಿರುವ ಜವಾಬ್ದಾರಿ, ಹೊಣೆ ಕುರಿತಂತೆಯೂ ಅರಿವು ಮೂಡಿಸದ ಹೊರತು ರಾಜಕಾರಣಿಗಳ ಕೆಟ್ಟ ಚಾಳಿಗೆ ತಡೆಯುಂಟಾಗದೆಂದು ವಿವರಿಸಿದರು.

ಆಯ್ಕೆಯಾದ ನಂತರ ಇಂದಿನ ರಾಜಕಾರಣಿಗಳು ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಇತರೆ ಪಕ್ಷಗಳಿಗೆ ಹೋಗುವುದು, ಇತರರೂ ಅಂತಹವರನ್ನು ತಮ್ಮ ಪಕ್ಷಗಳಿಗೆ ಕರೆಯುವುದು ನಡೆದಿರುವ ಹಿನ್ನೆಲೆಯಲ್ಲಿ ಮತದಾರರು ಸಹಾ ತಮ್ಮ ಹೊಣೆ ಅರಿತು, ಅಂತಹವರನ್ನು ಪ್ರಶ್ನಿಸಬೇಕಾಗಿದೆ ಎಂದು ಎಸ್.ಆರ್.ಹಿರೇಮಠ್ ಹೇಳಿದರು.

ದೇಶದ ಪ್ರಜಾಪ್ರಭುತ್ವ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರು ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ತಾವು ಬರೆದ ಪತ್ರ ಹಾಗೂ ಪ್ರಜಾಪ್ರಭುತ್ವ ರಕ್ಷಣೆ ಹಿನ್ನೆಲೆಯಲ್ಲಿ ಜೂ.29 ಮತ್ತು 30 ರಂದು ದೆಹಲಿಯ ಗಾಂಧಿ ಪ್ರತಿಷ್ಠಾನದಲ್ಲಿ ಕರೆದಿರುವ ಜನಸಂಕಲ್ಪ ಸಭೆ ಕುರಿತು ಮಾಹಿತಿ ನೀಡಿದರು. ದೇಶದಲ್ಲಿನ ಈ ರೀತಿಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಹಿಂದೆ ಜಯಪ್ರಕಾಶ್ ನಾರಾಯಣ್ ಅವರು ನಡೆಸಿದ ರೀತಿಯ ಆಂದೋಲನ ಮತ್ತೊಮ್ಮೆ ಈಗ ಅಗತ್ಯವಾಗಿದೆ ಎಂಬ ಕಾರಣಕ್ಕಾಗಿ ತಮ್ಮ ಸಂಸ್ಥೆ ದೆಹಲಿಯಲ್ಲಿ ಚರ್ಚಿಸಿ, ಕಾರ್ಯರೂಪಕ್ಕಿಳಿಯಲಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಚಂದ್ರಶೇಖರ ಮೇಟಿ, ಅಭಿರುಚಿ ಗಣೇಶ್, ಕರುಣಾಕರನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News