ಗೋಡ್ಸೆಯ ಜೊತೆಗೆ ಕಸಬ್‌ನನ್ನೂ ತಬ್ಬಿಕೊಂಡ ಸಂಸದ ಕಟೀಲು

Update: 2019-05-18 04:36 GMT

‘ಗೋಡ್ಸೆ ದೇಶಭಕ್ತನೋ-ಭಯೋತ್ಪಾದಕನೋ?’ ಎನ್ನುವ ಚರ್ಚೆಯೇ ಅಸಂಗತ ವಾದುದು. ಅದನ್ನೊಂದು ಚರ್ಚೆಯ ವಿಷಯವನ್ನಾಗಿಸಿದವರ ಉದ್ದೇಶ ಸ್ಪಷ್ಟ. ಈ ದೇಶದ ಸುದೀರ್ಘ ಸ್ವಾತಂತ್ರ ಹೋರಾಟದ ಇತಿಹಾಸಕ್ಕೆ ಮತ್ತು ಪ್ರಜಾಸತ್ತೆಗೆ ದ್ರೋಹ ಬಗೆದವರೇ ಈ ಚರ್ಚೆಯನ್ನು ಹುಟ್ಟಿಸಿ ಹಾಕಿದ್ದಾರೆ. ಈ ಮೂಲಕ ದೇಶದ ಸದ್ಯದ ಎಲ್ಲ ಮೂಲಭೂತ ಸಮಸ್ಯೆಗಳ ಕಡೆಗೆ ಜನರ ಗಮನ ಹರಿಯದಂತೆ ನೋಡಿಕೊಳ್ಳುವುದು ಒಂದು ಉದ್ದೇಶವಾಗಿದ್ದರೆ, ಇನ್ನೊಂದು ಸಾವರ್ಕರ್‌ರನ್ನು ಹೇಗೆ ಸಂಸತ್‌ನೊಳಗೆ ತರಲಾಯಿತೋ ಅಂತೆಯೇ ಗೋಡ್ಸೆಯ ಕುರಿತಂತೆ ಈ ದೇಶದಲ್ಲಿ ಭಿನ್ನಾಭಿಪ್ರಾಯವಿದೆ ಎನ್ನುವ ಮನಸ್ಥಿತಿಯನ್ನು ಹುಟ್ಟು ಹಾಕುವುದು. ಹಂತಹಂತವಾಗಿ ದೇಶದ ಜನರ ಮೇಲೆ ಗೋಡ್ಸೆಯನ್ನು ಹೇರುವುದು. ಗಾಂಧೀಜಿಯನ್ನು ಕೊಂದ ಗೋಡ್ಸೆಯ ಉದ್ದೇಶ ಕೇವಲ ಗಾಂಧೀಜಿಯಷ್ಟೇ ಆಗಿರಲಿಲ್ಲ. ಜಾತ್ಯತೀತ ಪ್ರಜಾಸತ್ತಾತ್ಮಕ ದೇಶವಾಗಿ ಭಾರತ ಜನ್ಮ ತಾಳಲು ಗಾಂಧೀಜಿ ಪ್ರಮುಖ ಕಾರಣವಾಗಿರುವುದೇ ಆತ ಮತ್ತು ಆತನ ತಂಡದ ಸಿಟ್ಟಾಗಿತ್ತು. ಈ ದೇಶವನ್ನು ಕಟ್ಟುವುದಕ್ಕಾಗಿ ಬಲಿದಾನಗೈದ ಸಹಸ್ರಾರು ಜನರನ್ನು ಗುರಿಯಾಗಿಟ್ಟು ಗೋಡ್ಸೆ ತನ್ನ ಪಿಸ್ತೂಲ್‌ನಿಂದ ಗುಂಡನ್ನು ಸಿಡಿಸಿದ. ಭೌತಿಕವಾಗಿ ಸತ್ತಿದ್ದು ಒಬ್ಬ ಗಾಂಧಿಯೇ ಆಗಿರಬಹುದು, ಆದರೆ ಆತನ ಜೊತೆಗೆ ಸ್ವಾತಂತ್ರ ಹೋರಾಟದ ಕನಸುಗಳು, ಗಾಂಧಿಯ ಶ್ರೀರಾಮನ ಆದರ್ಶ ಎಲ್ಲವನ್ನೂ ನಾಶ ಪಡಿಸಿ, ಆ ಸ್ಥಾನದಲ್ಲಿ ಹಿಂದೂ ಮಹಾಸಭಾದ ಹಿಂಸಾತ್ಮಕ ರಾಮನನ್ನು ತಂದು ಕೂರಿಸುವುದು ಗುರಿಯಾಗಿತ್ತು. ಮುಸ್ಲಿಮ್ ದೊರೆಗಳು ಮತ್ತು ಬ್ರಿಟಿಷರ ಕಾರಣದಿಂದ ಅಸ್ತವ್ಯಸ್ತಗೊಂಡ ವರ್ಣಾಶ್ರಮ ವ್ಯವಸ್ಥೆಯನ್ನು ಮರುಸ್ಥಾಪಿಸುವುದು, ವೈದಿಕ ಸಂಸ್ಕೃತಿಯನ್ನು ಮೀರಿ ಪಾಶ್ಚಾತ್ಯ ಕಲಿಕೆಯ ಮೂಲಕ ಆಧುನಿಕಗೊಂಡ ಹೆಣ್ಣನ್ನು ಮತ್ತೆ ವೈದಿಕ ಸಂಸ್ಕೃತಿಯ ವರ್ತುಲದೊಳಗೆ ತಂದು ನಿಲ್ಲಿಸುವುದು ಹಿಂದೂ ಮಹಾ ಸಭಾದ ಕನಸಾಗಿತ್ತು. ಸ್ವತಂತ್ರ ಭಾರತ, ಮನು ಆಧಾರಿತ ಸಂವಿಧಾನದ ತಳಹದಿಯಲ್ಲಿ ಹಿಂದೂ ರಾಷ್ಟ್ರವಾಗಬೇಕು ಎನ್ನುವ ಅವರ ಉದ್ದೇಶಕ್ಕೆ ಗಾಂಧೀಜಿಯ ಹಿಂದೂ ಧರ್ಮ ಮತ್ತು ಅವರ ಶ್ರೀರಾಮ ದೊಡ್ಡ ಸವಾಲಾಯಿತು. ಗಾಂಧಿಯ ಕೊಲೆಗೆ ಹಿಂದೂ ಮಹಾ ಸಭಾದ ಹತಾಶೆಯ ಪರಮಾವಧಿ ಕಾರಣ.

ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ ಗಾಂಧೀಜಿಯನ್ನು ಕೊಂದ ಗೋಡ್ಸೆ ‘ದೇಶ ಭಕ್ತ’ ಎಂದು ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್ ಠಾಕೂರ್ ಕರೆಯುವುದು ಸಹಜವೇ ಆಗಿದೆ. ಸ್ವತಃ ಭಯೋತ್ಪಾದನೆಯ ಆರೋಪ ಹೊತ್ತ ಪ್ರಜ್ಞಾ ಸಿಂಗ್‌ಗೆ ಗೋಡ್ಸೆಯಲ್ಲದೆ ಗಾಂಧಿ ದೇಶಭಕ್ತ ಆಗಲು ಕಾರಣಗಳೇ ಇಲ್ಲ. ತೋಳ ಸನ್ಯಾಸಿ ವೇಷದಲಿ ಬಂದಾಕ್ಷಣ ಕುರಿಯನ್ನು ತಿನ್ನದೇ ಬಿಡುವುದೇ? ಭಯೋತ್ಪಾದಕರನ್ನು ಮಟ್ಟಹಾಕುವ ಹೋರಾಟದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆಯನ್ನು ‘ದೇಶ ದ್ರೋಹಿ’ ಎಂದು ಈಕೆ ಕರೆದಾಗಲೂ ಅದರಲ್ಲಿ ಅಚ್ಚರಿ ಪಡುವಂತಹದಿರಲಿಲ್ಲ. ಈಕೆ ಮತ್ತು ಈಕೆಯ ತಂಡದ ವಿಧ್ವಂಸಕ ಕೃತ್ಯಗಳನ್ನು ತನಿಖೆ ಮಾಡಿ ಇವರನ್ನು ಸೇರಬೇಕಾದ ಜಾಗಕ್ಕೆ ಸೇರಿಸಿದ ಪೊಲೀಸ್ ಅಧಿಕಾರಿಯನ್ನು ಈಕೆ ಕೊಂಡಾಡುವುದು ಸಾಧ್ಯವಿಲ್ಲದ ಮಾತು. ಕರ್ಕರೆ ಕುರಿತ ವಿವಾದಾತ್ಮಕ ಹೇಳಿಕೆಗಳನ್ನು ಇದೇ ಬಿಜೆಪಿಯೊಳಗಿರುವ ಹಲವು ನಾಯಕರು ಪರೋಕ್ಷ ಬೆಂಬಲಿಸಿದ್ದರು. ಕರ್ಕರೆಯನ್ನು ಪರೋಕ್ಷವಾಗಿ ದೂಷಿಸಿದ್ದರು. ಇದರಿಂದ ಕುಮ್ಮಕ್ಕು ಪಡೆದ ಪ್ರಜ್ಞಾ ಸಿಂಗ್ ‘ಗೋಡ್ಸೆ ದೇಶ ಭಕ್ತ’ ಎಂಬ ಇನ್ನೊಂದು ಬಾಂಬ್ ಹಾಕಿದ್ದಾಳೆ. ಆದರೆ ಈ ಬಾಂಬ್‌ಗೆ ಸ್ವತಃ ಬಿಜೆಪಿಯೇ ಸಣ್ಣಗೆ ಕಂಪಿಸಿದಂತಿದೆ.

ಇಂದಿಗೂ ಬಿಜೆಪಿಗೆ ಮತಹಾಕುವ, ಹಿಂದೂಧರ್ಮದ ಬಗ್ಗೆ ಅಪಾರ ಅಭಿಮಾನವುಳ್ಳ ಬಹುಸಂಖ್ಯೆಯ ಮತದಾರರು ಗಾಂಧೀಜಿಯನ್ನು ಗೌರವಿಸುತ್ತಾರೆ ಮತ್ತು ಗೋಡ್ಸೆ ದೇಶದ್ರೋಹಿ ಎನ್ನುವುದನ್ನು ಮನಸಾರೆ ಒಪ್ಪುತ್ತಾರೆ. ಗೋಡ್ಸೆಯ ಹಿಂದೂ ಧರ್ಮ ಬೇರೆ, ಗಾಂಧಿಯ ಹಿಂದೂ ಧರ್ಮ ಬೇರೆ ಎನ್ನುವುದನ್ನು ಬಿಜೆಪಿಯೊಂದಿಗೆ ಒಲವಿರುವ ಬಹುಸಂಖ್ಯೆಯ ಜನರಿಗೆ ಅರಿವಿದೆ. ಅವರೆಂದೂ ಗೋಡ್ಸೆಯ ಹಿಂದುತ್ವವನ್ನು ಬೆಂಬಲಿಸಲಾರರು. ಜೊತೆಗೆ ಬಿಜೆಪಿಯ ಜೊತೆಗಿರುವ ಮಿತ್ರ ಪಕ್ಷಗಳಿಗೂ ಗೋಡ್ಸೆ ಪರ ಹೇಳಿಕೆ ತೀವ್ರ ಮುಜುಗರವನ್ನು ತಂದಿದೆ. ಅಧಿಕಾರಕ್ಕಾಗಿ ಬಿಜೆಪಿಯ ಜೊತೆಗೆ ಕೈ ಜೋಡಿಸಿರುವ ಈ ಪಕ್ಷಗಳು ಎಂದಿಗೂ ಗೋಡ್ಸೆಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಾರವು. ಅವರೆಲ್ಲರೂ ಬಿಜೆಪಿಗೆ ಒತ್ತಡ ಹಾಕಿದ ಪರಿಣಾಮವಾಗಿ ಮೋದಿ ಬಳಗ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬಿಜೆಪಿ ‘ಪ್ರಜ್ಞಾ ಸಿಂಗ್ ಹೇಳಿಕೆಗೆ ಬಿಜೆಪಿ ಹೊಣೆಯಲ್ಲ’ ಎಂದಿದೆ. ಮೋದಿಯವರಂತೂ ಒಂದು ಹೆಜ್ಜೆ ಮುಂದೆ ಹೋಗಿ ‘‘ಪ್ರಜ್ಞಾ ಅವರನ್ನು ನಾನು ಕ್ಷಮಿಸುವುದಿಲ್ಲ’’ ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ. ಮೋದಿಯವರ ‘ಮೊಸಳೆ ಕಣ್ಣೀರು’ ಇದು. ಇನ್ನೂ ಕ್ಲೀನ್ ಚಿಟ್ ಸಿಗದ ಒಬ್ಬ ಶಂಕಿತ ಭಯೋತ್ಪಾದಕಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿರುವ ಬಿಜೆಪಿ, ಇದೀಗ ಆಕೆಯ ಹೇಳಿಕೆಗೂ, ತನಗೂ ಸಂಬಂಧವಿಲ್ಲ ಎಂದರೆ ಅದನ್ನು ನಂಬುವವರಾರು? ಆಕೆಯನ್ನು ಕ್ಷಮಿಸುವುದಿಲ್ಲ ಎಂದಿರುವ ಮೋದಿ, ಆಕೆಯನ್ನು ಪಕ್ಷದಿಂದ ವಜಾಗೊಳಿಸುವರೇ? ಒಂದು ರೀತಿಯಲ್ಲಿ ಆಕೆಯ ಬಾಯಿಯಿಂದ ಇಂತಹದೊಂದು ಮಾತುಗಳನ್ನು ಆಡಿಸಿ ಅದನ್ನು ಚರ್ಚೆಗೆ ತಂದಿರುವುದೇ ಬಿಜೆಪಿಯಾಗಿದೆ. ಬಿಜೆಪಿ ನಿಧಾನಕ್ಕೆ ಪೊರೆಕಳಚಿಕೊಳ್ಳುತ್ತಿದೆ. ಅದರ ಅಸಲಿ ಮುಖ ಪ್ರಕಟವಾಗುವ ದಿನ ಹತ್ತಿರವಾಗುತ್ತಿದೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಇಬ್ಬರು ಸಂಸದರು ಪ್ರಜ್ಞಾ ಸಿಂಗ್ ಠಾಕೂರ್‌ರ ದೇಶದ್ರೋಹಿ ಹೇಳಿಕೆಗೆ ಸಾಥ್ ನೀಡಿದ್ದಾರೆ. ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಎಂಬ ಹೇಳಿಕೆಯಿಂದಲೇ ಕುಖ್ಯಾತರಾಗಿರುವ ಸಂಸದ ನಳಿನ್ ಕುಮಾರ್ ಕಟೀಲು ಗೋಡ್ಸೆಯನ್ನು ಸಮರ್ಥಿಸುವ ಭರದಲ್ಲಿ ‘ಗೋಡ್ಸೆ ಕೊಂದದ್ದು ಒಬ್ಬನನ್ನು. ಕಸಬ್ ಕೊಂದಿದ್ದು 70 ಮಂದಿಯನ್ನು, ರಾಜೀವ್‌ಗಾಂಧಿ ಕೊಂದಿದ್ದು 17,000 ಜನರನ್ನು’ ಎಂಬ ಪಟ್ಟಿ ನೀಡಿದ್ದಾರೆ. ಅತ್ಯಂತ ಮೂರ್ಖ ಮತ್ತು ಬೇಜವಾಬ್ದಾರಿತನದ ದೇಶ ವಿರೋಧಿ ಹೇಳಿಕೆ ಇದು. ಗೋಡ್ಸೆಯನ್ನು ಸಮರ್ಥಿಸುವ ಜೊತೆಗೆ ಕಸಬ್‌ನನ್ನು ಅವರು ಪರೋಕ್ಷ ತಬ್ಬಿಕೊಂಡಿದ್ದಾರೆ. ರಾಜೀವ್ ಗಾಂಧಿಗಿಂತ ಇವರಿಬ್ಬರು ಮೇಲು ಎಂದು ಅವರು ಅಭಿಪ್ರಾಯ ಪಡುತ್ತಾರೆ. ಇದರ ಬೆನ್ನಿಗೆ, ದ್ವೇಷ ಕಾರುವುದು ಹೊರತು ಪಡಿಸಿ ಯಾವ ರಾಜಕಾರಣವೂ ಗೊತ್ತಿಲ್ಲದ ಅನಂತಕುಮಾರ್ ಹೆಗಡೆ ಗೋಡ್ಸೆ ಪರ ಹೇಳಿಕೆ ನೀಡಿದ್ದಾರೆ. ಆದರೆ ಯಾವಾಗ ದಿಲ್ಲಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದರೋ, ತಕ್ಷಣ ಬಾಲ ಮಡಚಿ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ಮಂಗಳೂರಿನ ಅಭಿವೃದ್ಧಿಗಿಂತ ಮಂಗಳೂರಿಗೆ ಬೆಂಕಿ ಹಚ್ಚುವುದರಲ್ಲೇ ಆಸಕ್ತಿ ಹೊಂದಿರುವ ಕಟೀಲು, ಹೆಣಗಳ ಲೆಕ್ಕ ಹಾಕುತ್ತಿರುವುದು ಇದೇ ಮೊದಲೇನಲ್ಲ. ಗಾಂಧಿ ಎಂದರೆ ಒಬ್ಬ ವ್ಯಕ್ತಿಯಲ್ಲ, ಅದೊಂದು ತತ್ವ, ಸಿದ್ಧಾಂತ. ಅದೊಂದು ಸಮುದಾಯ ಎನ್ನುವುದನ್ನು ಈ ಕಟೀಲಿಗೆ ಮನವರಿಕೆ ಮಾಡಿಕೊಡುವುದು ಕಷ್ಟ. ಸಂಸದನಾಗಿ ಹತ್ತುವರ್ಷದಲ್ಲಿ ಒಂದು ಮೇಲ್ಸೇತುವೆ ಸಾಧ್ಯವಾಗದ ಈ ಸಂಸದ ಮರು ಆಯ್ಕೆಯಾದರೆ ಅರ್ಧದಲ್ಲಿ ನಿಂತ ಪಂಪ್‌ವೆಲ್ ಬ್ರಿಡ್ಜ್‌ನ್ನು ‘ಗೋಡ್ಸೆಯ ಸ್ಮಾರಕ’ವಾಗಿ ಘೋಷಿಸುವ ಎಲ್ಲ ಸಾಧ್ಯತೆಗಳಿವೆ. ಪದೇ ಪದೇ ತನ್ನ ಅವಿವೇಕಿತನವನ್ನು ಸಾಬೀತು ಮಾಡುತ್ತಿದ್ದರೂ ಮತ್ತೆ ಮತ್ತೆ ತನ್ನನ್ನೇ ಆಯ್ಕೆ ಮಾಡುತ್ತಿರುವ ಮತದಾರರಿಗೆ ಅವರು ನೀಡಬಹುದಾದ ಅತ್ಯುತ್ತಮ ಕೊಡುಗೆ ಅದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News