ಚಿಂಚೋಳಿ-ಕುಂದಗೋಳ ಕ್ಷೇತ್ರಗಳ ಉಪ ಚುನಾವಣೆ: ನಾಳೆ ಮತದಾನ

Update: 2019-05-18 12:23 GMT

ಬೆಂಗಳೂರು, ಮೇ 18: ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ವಿಪಕ್ಷ ಬಿಜೆಪಿಯ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಚಿಂಚೋಳಿ ಮತ್ತು ಕುಂದುಗೋಳ ಕ್ಷೇತ್ರಗಳ ಉಪ ಚುನಾವಣೆಗೆ ನಾಳೆ(ಮೇ 19) ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆಯಲಿದೆ.

ಎರಡೂ ಕ್ಷೇತ್ರಗಳಲ್ಲಿಯೂ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತ ಯಂತ್ರದ ಜತೆಗೆ ಚುನಾವಣಾ ಸಾಮಗ್ರಿಗಳೊಂದಿಗೆ ಮತಗಟ್ಟೆಗಳಲ್ಲಿ ರಾತ್ರಿಯಿಂದಲೇ ಬೀಡುಬಿಟ್ಟಿದ್ದು, ಬೆಳಗ್ಗೆಯಿಂದ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಿದ್ದಾರೆ. ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಸಾಮಾನ್ಯ ಸೇರಿದಂತೆ ಚಿಂಚೋಳಿ ಕ್ಷೇತ್ರದಲ್ಲಿ 241 ಹಾಗೂ ಕುಂದುಗೋಳ ಕ್ಷೇತ್ರದಲ್ಲಿ ಒಟ್ಟು 214 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚಿಂಚೋಳಿಯಲ್ಲಿ ಮೈತ್ರಿ ಅಭ್ಯರ್ಥಿ ಸುಭಾಷ್ ರಾಠೋಡ್ ಹಾಗೂ ಬಿಜೆಪಿಯ ಅವಿನಾಶ್ ಜಾಧವ್ ಸೇರಿದಂತೆ 17 ಮಂದಿ ಕಣದಲ್ಲಿದ್ದಾರೆ. ಅತ್ತ ಕುಂದಗೋಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಹಾಗೂ ಬಿಜೆಪಿಯ ಚಿಕ್ಕನಗೌಡರ ಸೇರಿ 8 ಮಂದಿ ಕಣದಲ್ಲಿದ್ದು, ಉಭಯ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹವನ್ನು 3.83 ಲಕ್ಷಕ್ಕೂ ಅಧಿಕ ಮಂದಿ ಮತದಾರರು ತೀರ್ಮಾನಿಸಲಿದ್ದಾರೆ.

ಮತದಾರರ ಅನುಕೂಲಕ್ಕಾಗಿ ಎರಡೂ ಕ್ಷೇತ್ರದಲ್ಲಿಯೂ ರಜೆ ಘೋಷಣೆ ಮಾಡಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮತದಾರರ ಗುರುತಿನ ಚೀಟಿ ಇಲ್ಲದೆ ಇರುವವರು ಪಾಸ್‌ಪೋರ್ಟ್, ಡೈವಿಂಗ್ ಲೈನಸ್ಸ್, ಆಧಾರ್ ಕಾರ್ಡ್, ಪಡಿತರ ಚೀಟಿ ಸಹಿತ ಇತರೆ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ ತಮ್ಮ ಹಕ್ಕು ಚಲಾಯಿಸಬಹುದು.

ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಎಡಗೈ ಮಧ್ಯದ ಬೆರಳಿಗೆ ಶಾಯಿ: ಲೋಕಸಭೆ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗಿದ್ದು, ಇದೀಗ ಎರಡೂ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಗುತ್ತದೆ ಎಂದು ಚುನಾವಣೆ ಆಯೋಗ ನಿರ್ದೇಶನ ನೀಡದೆ.

ಅನ್ನಕ್ಕಾಗಿ ಸಿಬ್ಬಂದಿ ಪ್ರತಿಭಟನೆ:

ಕುಂದಗೋಳ ಉಪ ಚುನಾವಣೆ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಿಬ್ಬಂದಿ ಮಧ್ಯಾಹ್ನದ ಊಟ ಖಾಲಿಯಾದ ಕಾರಣ ಕೆಲ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಅನ್ನ-ಸಂಬಾರ್, ಬದನೆಕಾಯಿ ಪಲ್ಯ, ಮಜ್ಜಿಗೆ ಹಾಗೂ ಬಾಟಲಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಅನ್ನ ಖಾಲಿಯಾಗಿ ಗೊಂದಲ ಉಂಟಾಗಿತ್ತು. ಕೂಡಲೇ ಮಧ್ಯ ಪ್ರವೇಶಿಸಿದ ಚುನಾವಣಾಧಿಕಾರಿಗಳು ಗೊಂದಲ ನಿವಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News