ಬೆಳಗಾವಿ: ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿದ ಸಚಿವ ಆರ್.ವಿ.ದೇಶಪಾಂಡೆ

Update: 2019-05-18 12:32 GMT

ಬೆಳಗಾವಿ, ಮೇ 18: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಶನಿವಾರ ನರೇಗಾ ಯೋಜನೆಯಡಿ ಹೊನಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಂಬಳ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನರೇಗಾ ಕಾರ್ಮಿಕರ ಜತೆ ಸಂವಾದ ನಡೆಸಿದ ದೇಶಪಾಂಡೆ, ಬರ ಪರಿಸ್ಥಿತಿಯಲ್ಲಿ ಜನರು ಗುಳೇ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಭಾಗದ ಎಲ್ಲ ಕುಟುಂಬಗಳಿಗೂ ವರ್ಷವಿಡೀ ಉದ್ಯೋಗ ಒದಗಿಸಲು ಸರಕಾರ ಉದ್ದೇಶಿಸಿದೆ ಎಂದರು.

ಕೆಲಸವಿಲ್ಲದ ಕಾರಣಕ್ಕೆ ಯಾವುದೇ ಕುಟುಂಬ ಗುಳೆ ಹೋಗುವುದನ್ನು ತಡೆಯಲು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಗೆ 40 ಲೀಟರ್ ಕುಡಿಯುವ ನೀರು ಪ್ರತಿದಿನ ಪೂರೈಕೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ಗೋಶಾಲೆ ಹಾಗೂ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಬರ ನಿರ್ವಹಣೆಗೆ ಸರಕಾರ ಯುದ್ದೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಬರ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಅಗತ್ಯತೆ ಆಧರಿಸಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗುವುದು. ಮೋಡ ಬಿತ್ತನೆ ನಿರ್ಣಯ ಮಾಡಲಾಗಿದ್ದು, ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೋಡ ಬಿತ್ತನೆ ಮಾಡಲಾಗುತ್ತದೆ ಎಂದು ದೇಶಪಾಂಡೆ ಹೇಳಿದರು.

ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿ ತೀರದ ಜನರಿಗೆ ಕುಡಿಯಲು ತಕ್ಷಣ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲೇ ನೀರು ಹಂಚಿಕೆ ಕುರಿತು ಒಡಂಬಡಿಕೆಗೆ ಸರಕಾರ ಸಹಿ ಹಾಕಲಿದೆ. ಒಡಂಬಡಿಕೆಗೆ ಕಾಯದೇ ಮಾನವೀಯತೆ ಆಧಾರದ ಮೇಲೆ ಮಹಾರಾಷ್ಟ್ರ ಸರಕಾರ ನೀರು ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಬರ ನಿರ್ವಹಣೆಗೆ ಸುಮಾರು 700 ಕೋಟಿ ರೂ.ಹಣವಿದೆ. ಬರ ಪೀಡಿತ ಪ್ರದೇಶಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 2,999 ಗ್ರಾಮಗಳಿಗೆ 2300 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ದೇಶಪಾಂಡೆ ಹೇಳಿದರು.

ಬೆಳಗಾವಿ ಜಿಲ್ಲೆಗೆ ಹೆಚ್ಚುವರಿಯಾಗಿ 38 ಸಾವಿರ ಮೇವಿನ ಕಿಟ್ ಬೇಡಿಕೆಯಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ರಾಜ್ಯದಲ್ಲಿ ಪ್ರತಿವರ್ಷ ತಲೆದೋರುವ ಬರಗಾಲ ಎದುರಿಸಲು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕೇಂದ್ರ ಸರಕಾರದ ಸಹಕಾರದ ಅಗತ್ಯವಿದೆ ಎಂದು ದೇಶಪಾಂಡೆ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News