ಮೈತ್ರಿ ಸರಕಾರ ವಿಸರ್ಜಿಸಿ ಚುನಾವಣೆಗೆ ಹೋಗಲಿ: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ

Update: 2019-05-18 14:07 GMT

ಹುಬ್ಬಳ್ಳಿ, ಮೇ 18: ರಾಜ್ಯದಲ್ಲಿ ಮೈತ್ರಿ ಸರಕಾರ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನ ಕೆಲ ನಾಯಕರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಹೇಳುತ್ತಿದ್ದಾರೆ. ಹೀಗಾಗಿ ಮೈತ್ರಿ ಸರಕಾರ ವಿಸರ್ಜಿಸಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಭಾಪತಿ, ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ. ಹೀಗಾಗಿ ಸರಕಾರವನ್ನು ವಿಸರ್ಜಿಸಿ ಚುನಾವಣೆಗೆ ಹೋಗುವುದೊಂದೇ ಪರಿಹಾರ ಎಂದು ಹೇಳಿದರು.

ನಮ್ಮಲ್ಲಿ ಮೈತ್ರಿ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಯಿಂದ ಗೊಂದಲಗಳು ನಿರ್ಮಾಣವಾಗಿವೆ. ಬಿಜೆಪಿ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಇನ್ನಿಲ್ಲದ ಯತ್ನ ನಡೆಸುತ್ತಿದೆ. ಹೀಗಾದರೆ ಕುಮಾರಸ್ವಾಮಿ ಬೇಸತ್ತು ಸರಕಾರ ವಿಸರ್ಜಿಸಿದರೂ ಅಚ್ಚರಿ ಇಲ್ಲ. ಇಲ್ಲವೇ ಆಡಳಿತದ ಬಿಕ್ಕಟ್ಟು ಕಾರಣ ನೀಡಿ ರಾಜ್ಯಪಾಲರೇ ಸರಕಾರ ವಿಸರ್ಜಿಸಬಹುದು. ಇದು ಆಗುವುದಕ್ಕಿಂತಲೂ ಮೊದಲೇ ಸರಕಾರ ವಿಸರ್ಜಿಸುವುದು ಉತ್ತಮ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದಾದ್ರೆ ಜೆಡಿಎಸ್‌ ಯಾಕೆ ಬೆಂಬಲ ನೀಡಬೇಕು? ಕಾಂಗ್ರೆಸ್ ಹೈಕಮಾಂಡ್ ಐದು ವರ್ಷ ಕುಮಾರಸ್ವಾಮಿ ಸಿಎಂ ಅಂತಾ ಹೇಳಿದೆ. ಕುಮಾರಸ್ವಾಮಿ ಸಿಎಂ ಆಗಿ ಆಡಳಿತ ನಡೆಸ್ತಿದಾರೆ. ಹೀಗಿದ್ದರೂ ಅನಗತ್ಯವಾಗಿ ಸಿಎಂ ಸ್ಥಾನದ ಗೊಂದಲಗಳನ್ನ ಸೃಷ್ಟಿಸಲಾಗುತ್ತಿದೆ. ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಕೆಲ ನಿರುದ್ಯೋಗಿಗಳು ಸಿದ್ದರಾಮಯ್ಯ ಸಿಎಂ ಆಗಲಿ ಅಂತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದಾರೆ. ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಅಂತಲೂ ಹೇಳಿದ್ದರು. ಆದರೆ, ಈಗ ನೋಡಿದರೆ ನಾನ್ಯಾಕೆ ಮತ್ತೆ ಸಿಎಂ ಆಗಬಾರದು ಎನ್ನುತ್ತಿದ್ದಾರೆ.

-ಬಸವರಾಜ್ ಹೊರಟ್ಟಿ, ಜೆಡಿಎಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News