ರೇಷ್ಮಾ ಪಡೇಕನೂರು ನಿಗೂಢ ಸಾವು ಪ್ರಕರಣ: ಆರೋಪಿಗಳ ಶೀಘ್ರ ಪತ್ತೆಗೆ ಮಂಜುಳಾ ನಾಯ್ಡು ಒತ್ತಾಯ

Update: 2019-05-18 14:16 GMT
ರೇಷ್ಮಾ ಪಡೇಕನೂರು

ಬೆಂಗಳೂರು, ಮೇ 18: ವಿಜಯಪುರ ಜಿಲ್ಲೆಯ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರು ಅವರ ನಿಗೂಢ ಸಾವಿನ ಪ್ರಕರಣವನ್ನು ಶೀಘ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಒಕ್ಕೂಟದ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು ಒತ್ತಾಯಿಸಿದ್ದಾರೆ. 

ಶನಿವಾರ ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರು ನಿಗೂಢ ಸಾವಿನ ಪ್ರಕರಣವನ್ನು ಶೀಘ್ರ ತನಿಖೆ ನಡೆಸಲು ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಪತ್ರ ನೀಡಿ ಮಾತನಾಡಿದ ಅವರು, ಈ ಸಾವಿನ ಪ್ರಕರಣವು ಸಮಾಜಮುಖಿ ಹೋರಾಟಗಾರ್ತಿಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ರೇಷ್ಮಾ ಪಡೇಕನೂರು ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕಿ ಮಾತ್ರ ಆಗಿರಲಿಲ್ಲ. ಸಮಾಜಪರ ಕೆಲಸಗಳಲ್ಲಿ ಸದಾ ಮುಂದಿರುತ್ತಿದ್ದರು. ಮಹಿಳಾ ರಕ್ಷಣೆಯ ವಿಷಯದಲ್ಲಿ ಹಲವಾರು ಹೋರಾಟಗಳನ್ನು ರೂಪಿಸಿ, ನಮಗೆ ಸ್ಫೂರ್ತಿಯಾಗಿದ್ದರು. ಈಗ ಅವರು ನಿಗೂಢವಾಗಿ ಸಾವನ್ನಪ್ಪಿರುವುದು ಮಹಿಳಾ ಸಮುದಾಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕನ್ನಡಪರ ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡಿದ್ದ ರೇಷ್ಮಾ ಪಡೇಕನೂರು ನಿಗೂಢ ಸಾವಿನ ಹಿಂದಿರುವ ಸತ್ಯಾಸತ್ಯತೆಗಳು ಹಾಗೆಯೆ ಮುಚ್ಚಿ ಹೋಗಬಾರದು. ಅವರ ಹತ್ಯೆಯ ಆರೋಪಿಗಳು ಹಾಗೂ ಆ ಹತ್ಯೆಗೆ ಇರಬಹುದಾದ ಕಾರಣಗಳನ್ನು ತನಿಖೆ ನಡೆಸುವ ಮೂಲಕ ಮಹಿಳಾ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಹಕ್ಕೊತ್ತಾಯಗಳು

-ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರು ನಿಗೂಢ ಸಾವನ್ನು ಶೀಘ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು.

-ರೇಷ್ಮಾ ಪಡೇಕನೂರು ಹತ್ಯೆಯ ಹಿಂದಿರುವ ಸತ್ಯಾಸತ್ಯೆತೆಗಳು ಬಹಿರಂಗಗೊಳ್ಳಬೇಕು.

-ಮಹಿಳಾ ನಾಯಕಿಯರ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಹಾಗೂ ಪೊಲೀಸ್ ಇಲಾಖೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

-ವಿದ್ಯಾರ್ಥಿನಿಯರು, ಕಾರ್ಮಿಕ ಮಹಿಳೆಯರು ಸೇರಿದಂತೆ ನೌಕರಿಗೆ ಹೋಗುವ ಮಹಿಳಾ ಸಮುದಾಯಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News