ಮಾಜಿ ಶಾಸಕ ಸಂಭಾಜಿ ಪಾಟೀಲ್ ನಿಧನ

Update: 2019-05-18 14:25 GMT

ಬೆಳಗಾವಿ, ಮೇ 18: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯ ಮುಖಂಡ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದ ಸಂಭಾಜಿ ಪಾಟೀಲ್(66) ಶುಕ್ರವಾರ ರಾತ್ರಿ 8.45ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. 

ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದ ಸಂಭಾಜಿ ಪಾಟೀಲ್, ಬೆಳಗಾವಿ ಮಹಾನಗರ ಪಾಲಿಕೆಗೆ ನಾಲ್ಕು ಬಾರಿ ಮೇಯರ್ ಆಗಿ ಕೆಲಸ ಮಾಡಿದ್ದರು. 1990, 1992, 1999 ಮತ್ತು 2003ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗುವ ಮೂಲಕ, ನಾಲ್ಕು ಬಾರಿ ಮೇಯರ್ ಆದ ದೇಶದ ಮೊದಲ ವ್ಯಕ್ತಿ ಎಂದು ಸಂಭಾಜಿ ಪಾಟೀಲ್ ದಾಖಲೆ ನಿರ್ಮಿಸಿದ್ದರು.

ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಜೊತೆ ಉತ್ತಮ ಒಡನಾಟ ಹೊಂದಿದ್ದ ಸಂಭಾಜಿ ಪಾಟೀಲ್, ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಅನುಷ್ಠಾನಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಬಂಗಾರಪ್ಪ ಆಡಳಿತಾವಧಿಯಲ್ಲಿ ಈ ಯೋಜನೆಗೆ ಅನುದಾನವನ್ನು ಮಂಜೂರು ಮಾಡಿಸಿದ್ದರು.

ಡಿಕೆಶಿ ಸಂತಾಪ: ಬೆಳಗಾವಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ರಾಜಕಾರಣಿ ಸಂಭಾಜಿ ರಾವ್ ಪಾಟೀಲ್ ನಿಧನದ ಸುದ್ದಿ ಬೇಸರ ತಂದಿದೆ. ಅವರ ಜತೆಗಿನ ನನ್ನ ಒಡನಾಟ ಮರೆಯಲಾಗದಂತದ್ದು. ಅವರು ಓರ್ವ ಹುಟ್ಟು ಹೋರಾಟಗಾರ. ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತಾವು ಸಮರ್ಪಿಕೊಂಡಿದ್ದರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಾಲ್ಕು ಬಾರಿ ಮೇಯರ್ ಆಗಿ, ಶಾಸಕರಾಗಿ ಸಾಕಷ್ಟು ಜನಪ್ರಿಯ ಕೆಲಸಗಳನ್ನು ಮಾಡಿದ್ದ ಸಂಭಾಜಿ, ಅಪಾರ ಜನ ಬಲ ಹೊಂದಿದ್ದರು. ಅವರು ರಾಜಕೀಯವಾಗಿ ಪ್ರಬಲರಾಗಿದ್ದರು. ಎಲ್ಲ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಅವರ ಬೆಂಬಲವನ್ನು ಅವಲಂಬಿಸಿದ್ದರು. ಅವರ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಈ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಆರ್‌ವಿಡಿ ಶೋಕ: ಸಂಭಾಜಿ ಪಾಟೀಲ್ ನಿಧನದಿಂದಾಗಿ ಬೆಳಗಾವಿ ಜಿಲ್ಲೆಯೂ ಒಬ್ಬ ಒಳ್ಳೆಯ ನಾಯಕನನ್ನು ಕಳೆದುಕೊಂಡಿದೆ. ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದದ್ದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಶನಿವಾರ ಸಂಭಾಜಿ ಪಾಟೀಲ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಭಾಜಿ ನನ್ನ ಉತ್ತಮ ಸ್ನೇಹಿತರಾಗಿದ್ದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬ ವರ್ಗದವರಿಗೆ ನೀಡಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News